ಸಮಗ್ರ ಸುದ್ದಿ

ಕೇಂದ್ರ ಸರ್ಕಾರದ ಸಹಕಾರ ಕೋರಿ 7 ನಿರ್ಣಯಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ

Share

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿಂದು ವಿಧಾನಸಭೆ ಕಲಾಪದಲ್ಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಕೋರಿದ 7 ನಿರ್ಣಯಗಳಿಗೆ ಸರ್ವಾನುಮತದ ಅಂಗೀಕಾರ ದೊರೆಯಿತು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಬೆಂಗಳೂರು ಪ್ರದೇಶದಲ್ಲಿನ ರಾಷ್ಟ್ರೀಯ ಪ್ರಾಮುಖ್ಯತೆ ಸಂಸ್ಥೆಗಳನ್ನು ಉತ್ತರ ಕರ್ನಾಟಕ್ಕೆ ಸ್ಥಳಾಂತರ ಮಾಡುವುದು, ಕೃಷ್ಣಾ ಜಲವಿವಾದ ನ್ಯಾಯಧೀಕರಣ-2 ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸುವುದು, ಮಹಾರಾಷ್ಟ್ರದ ವಿದರ್ಭ ಅಭಿವೃದ್ಧಿಗೆ ಮಂಡಳಿಗೆ ಕೇಂದ್ರ ಸರ್ಕಾರ ಪ್ರತಿವರ್ಷ ನೀಡುವ ಆರ್ಥಿಕ ನೆರವಿನ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಪ್ರತಿವರ್ಷ ರೂ.5000 ಕೋಟಿ ಆರ್ಥಿಕ ನೆರವು ನೀಡುವುದು, ರಾಜ್ಯದಿಂದ ಹೆಚ್ಚಿನ ಎಥೆನಾಲ್ ಖರೀದಿಸುವುದು, ಕಳಸಾ ಬಂಡೋರಿ ಯೋಜನೆ ಅನುಷ್ಠಾನಕ್ಕೆ ಮಂಜೂರಾತಿ ನೀಡುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಶೇ.50 ರಿಂದ ಶೇ.56ರಷ್ಟು ಹೆಚ್ಚಿಸಿದ ಮೀಸಲಾತಿ ಪ್ರಮಾಣದ ಅಧಿಸೂಚನೆ ಮತ್ತು ಆದೇಶಗಳನ್ನು ಭಾರತ ಸಂವಿಧಾನ ಅನುಸೂಚಿ-9 ಸೇರಿಸುವಂತೆ ಕೋರಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಸದನದಲ್ಲಿ ನಿರ್ಣಯಗಳನ್ನು ಮಂಡಿಸಿದರು.

ಚರ್ಚೆ ಬಳಿಕ ಸದನವು ಸರ್ವಾನುಮತದಿಂದ ನಿರ್ಣಯಗಳನ್ನು ಅಂಗೀಕರಿಸಿತು. ಈ ನಿರ್ಣಯಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು.


Share

You cannot copy content of this page