ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಸಂಕಲ್ಪದ ಅಡಿಯಲ್ಲಿ ಭಾರತವು 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಿದೆ ಎಂದ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಅದೇ ರೀತಿ 2047ರ ವೇಳೆಗೆ ವಾರ್ಷಿಕ 500 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಬೃಹತ್ ಗುರಿ ಹೊಂದಲಾಗಿದೆ ಎಂದರು.
ಈ ಗುರಿ ಸಾಕಾರಕ್ಕಾಗಿ ಭಾರತವನ್ನು ಜಾಗತಿಕ ಉಕ್ಕು ಸರಪಳಿಯೊಂದಿಗೆ ದೃಢವಾಗಿ ಸಂಯೋಜನೆ ಮಾಡಲಾಗುತ್ತದೆ ಹಾಗೂ ಜಾಗತಿಕ ಸಹಯೋಗಕ್ಕೆ ಹೊಸ ಮಾರ್ಗಗಳನ್ನು ತೆರೆಯಲು ಮತ್ತಷ್ಟು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ಮುಂದಿನ ಏಪ್ರಿಲ್ 2026ರಲ್ಲಿ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಭಾರತ್ ಸ್ಟೀಲ್ 2026 ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರದರ್ಶನದ ಭಾಗವಾಗಿ ನವದೆಹಲಿಯಲ್ಲಿ ಗುರುವಾರ ಪಾಲುದಾರ ರಾಷ್ಟ್ರಗಳ ರಾಯಭಾರಿಗಳು ಹಾಗೂ ಪ್ರತಿನಿಧಿಗಳ ಜತೆ ಸಂವಾದಾತ್ಮಕ ಸಭೆಯಲ್ಲಿ ಸಚಿವರು; ಈ ವಿಷಯವನ್ನು ಪ್ರಕಟಿಸಿದರು. ಈ ಪ್ರದರ್ಶನದಲ್ಲಿ ಭಾಗಿಯಾಗುವಂತೆ ಸಚಿವರು ಪಾಲುದಾರ ರಾಷ್ಟ್ರಗಳ ರಾಯಭಾರಿಗಳು, ಪ್ರತಿನಿಧಿಗಳಿಗೆ ಆಹ್ವಾನ ನೀಡಿದರು.
ಜಾಗತಿಕ ಉಕ್ಕಿನ ಮೌಲ್ಯ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ದೇಶಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕ ಪ್ರತಿನಿಧಿಗಳ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದ ಸಚಿವರು; ಜಾಗತಿಕ ಮಟ್ಟದ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಕ್ಕು ಉತ್ಪಾದಿಸುವ ಮತ್ತು ಉಕ್ಕು ಬಳಕೆಯ ರಾಷ್ಟ್ರಗಳೊಂದಿಗೆ ಭಾರತದ ಪಾಲುದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಚಿವರು ಮಾತುಕತೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು; ಭಾರತವು ವಿಶ್ವಾಸಾರ್ಹ ಅಂತಾರಾಷ್ಟ್ರೀಯ ಪಾಲುದಾರಿಕೆಗಳ ಮೇಲೆ ಹೆಚ್ಚು ಪ್ರಾಮುಖ್ಯತೆ ಕೇಂದ್ರೀಕರಿಸುತ್ತದೆ. ಭಾರತದ ಉಕ್ಕು ವಲಯವು ಇಂದು ದೇಶದ ವಿಶಾಲ ಆರ್ಥಿಕ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಬೆಳವಣಿಗೆ, ಸ್ಥಿತಿಸ್ಥಾಪಕತ್ವ ಮತ್ತು ಜಾಗತಿಕ ಒಗ್ಗೂಡುವಿಕೆಯ ಆಧಾರಸ್ತಂಭವಾಗಿ ಹೊರಹೊಮ್ಮಿದೆ ಎಂದು ಒತ್ತಿ ಹೇಳಿದರು.
ಭಾರತವು ಪ್ರಸ್ತುತ ಜಗತ್ತಿನ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ. ನಿರಂತರ ಸುಧಾರಣೆಗಳು, ಸ್ಥಿರ ಹೂಡಿಕೆಗಳು ಮತ್ತು ಆಧುನೀಕರಣ, ಸ್ವಾವಲಂಬನೆ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಿದ ಸ್ಪಷ್ಟ ದೀರ್ಘಕಾಲೀನ ದೃಷ್ಟಿಕೋನದ ಮೂಲಕ ಈ ಸ್ಥಾನವನ್ನು ಸಾಧಿಸಿದೆ ಎಂದು ಸಚಿವರು ಹೇಳಿದರು.
ಉಕ್ಕು ವಲಯವು ಭಾರತದ ಜಿಡಿಪಿಗೆ ಸುಮಾರು 2.5 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ ಮತ್ತು ಸುಮಾರು 2.8 ದಶಲಕ್ಷ ಜನರಿಗೆ ಉದ್ಯೋಗ ಒದಗಿಸಿದೆ. ಮೂಲಸೌಕರ್ಯ ವಿಸ್ತರಣೆ, ಉತ್ಪಾದನಾ ಬೆಳವಣಿಗೆ ಮತ್ತು ರಕ್ಷಣೆ ಮತ್ತು ಚಲನಶೀಲತೆಯಂತಹ ವಲಯಗಳಿಂದ ಹೆಚ್ಚೆಚ್ಚು ಬೇಡಿಕೆಗಳನ್ನು ಸ್ವೀಕರಿಸುತ್ತಿದೆ ಎಂದು ಅಂಶವನ್ನು ಸಚಿವರು ಉಲ್ಲೇಖಿಸಿದರು.
ಈ ಹಿನ್ನೆಲೆಯಲ್ಲಿ, ಉಕ್ಕು ಸಚಿವಾಲಯವು “ಭಾರತ್ ಸ್ಟೀಲ್” ಎಂಬ ಶೀರ್ಷಿಕೆಯ ವಾರ್ಷಿಕ ಪ್ರಮುಖ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನವನ್ನು ಸಾಂಸ್ಥಿಕಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಸಚಿವರು ಘೋಷಿಸಿದರು. ಮೊದಲ ಆವೃತ್ತಿಯಾದ ಭಾರತ್ ಸ್ಟೀಲ್ 2026 ಏಪ್ರಿಲ್ 2026 ರಲ್ಲಿ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ ಎಂದು ಅವರು ಸಭೆಗೆ ತಿಳಿಸಿದರು.
ಭಾರತ್ ಸ್ಟೀಲ್ 2026 ಅನ್ನು ಪ್ರಪಂಚದಾದ್ಯಂತ ಇರುವ ನೀತಿ ನಿರೂಪಕರು, ಉದ್ಯಮಿಗಳು, ಹೂಡಿಕೆದಾರರು, ತಂತ್ರಜ್ಞಾನ ಪೂರೈಕೆದಾರರು ಮತ್ತು ಖರೀದಿದಾರರನ್ನು ಒಟ್ಟುಗೂಡಿಸುವ ಜಾಗತಿಕ ವೇದಿಕೆಯಾಗಿ ರೂಪಿಸಲಾಗಿದೆ ಎಂದು ಸಚಿವರು ವಿವರಿಸಿದರು. ಅಲ್ಲದೆ; ಉಕ್ಕು ಬಳಕೆಯನ್ನು ವಿಸ್ತರಿಸುವುದು, ಸುಸ್ಥಿರತೆ ಮತ್ತು ಆರ್ಥಿಕತೆಯನ್ನು ಉತ್ತೇಜಿಸುವುದು, ಕಚ್ಚಾವಸ್ತುಗಳ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸುವುದು, ತಾಂತ್ರಿಕ ನಾವೀನ್ಯತೆಯನ್ನು ವೇಗಗೊಳಿಸುವುದು ಮತ್ತು ಸಾಮರ್ಥ್ಯ ವಿಸ್ತರಣೆಗಾಗಿ ಹೂಡಿಕೆಗಳನ್ನು ಸಕ್ರಿಯಗೊಳಿಸುವುದರ ಮೇಲೆ ಈ ಪ್ರದರ್ಶನ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು.
ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮ ಸೇರಿ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.
