ಸಮಗ್ರ ಸುದ್ದಿ

ಬಾಗ್ಮನೆ ಸಂಸ್ಥೆ ಸಾಧನೆ ದೇಶವೇ ಹೆಮ್ಮೆ ಪಡುವಂತದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

Share

ಮುಂಬೈ:ಬೆಂಗಳೂರು ಮೂಲದ ಬಾಗ್ಮನೆ ಸಂಸ್ಥೆಯ ಪ್ರಗತಿಯ ಸಾಧನೆಯು ಬೆಂಗಳೂರು, ಕರ್ನಾಟಕ ಮಾತ್ರವಲ್ಲ ಇಡೀ ದೇಶವೇ ಹೆಮ್ಮೆಪಡುವಂತದ್ದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶ್ಲಾಘಿಸಿದರು.

ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಗುರುವಾರ ಬಾಗ್ಮನೆ ಕೇಂದ್ರ ಕಚೇರಿ ಬೆಲ್ ರಿಂಗಿಂಗ್ ಕಾರ್ಯಕ್ರಮದಲ್ಲಿ ಡಿಸಿಎ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಇದೊಂದು ಅತ್ಯಂತ ಶ್ರೇಷ್ಠ ಕಾರ್ಯಕ್ರಮವಾಗಿದ್ದು, 30 ವರ್ಷಗಳ ಬಾಗ್ಮನೆ ಪಯಣದಲ್ಲಿ ಇಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಈ ಕಾರ್ಯಕ್ರಮ ಬರೀ ಆರ್ಥಿಕ ದೃಷ್ಟಿಕೋನದ ಕಾರ್ಯಕ್ರಮವಲ್ಲ. ಇದು ಗಳಿಸಿರುವ ನಂಬಿಕೆಗೆ ಸಾಕ್ಷಿಯಾಗಿದೆ. ಈ ಸಂಸ್ಥೆ ಮೊದಲ ದಿನದಿಂದಲೂ ತನ್ನ ಮೂಲವನ್ನು ಮರೆಯದೇ ಸಾಗಿಬಂದಿದೆ. ಬಾಗ್ಮನೆ ಪ್ರೈಮ್ ಆಫೀಸ್ ಆರ್ ಇಐಟಿ ಮೇಲೆ ಇಟ್ಟಿರುವ ನಂಬಿಕೆ ತುಂಬಾ ದೊಡ್ಡದು. ಈ ಸಂಸ್ಥೆ ಬೆಳವಣಿಗೆ ಹಿಂದೆ ಬಹಳಷ್ಟು ಕಠಿಣ ಪರಿಶ್ರಮವಿದೆ ಎಂದು ತಿಳಿಸಿದರು.

ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬಂದಿದ್ದರು. ಆ ಸಮಯದಲ್ಲಿ ನಾಲ್ಕೈದು ದೇಶಗಳ ನಾಯಕರು ಬೆಂಗಳೂರಿಗೆ ಬಂದು ಹೋಗಿದ್ದರು. ಆಗ ವಾಜಪೇಯಿ ಅವರು, ಇಷ್ಟು ಕಾಲ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ತೆರಳುತ್ತಿದ್ದಾರೆ ಎಂದರು.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಮೆಟ್ರೋ ಮಾರ್ಗ ಉದ್ಘಾಟನೆಗೆ ಆಗಮಿಸಿದ್ದಾಗ ಬೆಂಗಳೂರನ್ನು ‘ಜಾಗತಿಕ ನಗರ’ ಎಂದು ಬಣ್ಣಿಸಿದರು. ಬೆಂಗಳೂರು ಇಷ್ಟು ಪ್ರಮಾಣದಲ್ಲಿ ಮನ್ನಣೆ ಪಡೆಯುತ್ತಿರುವ ಬಗ್ಗೆ ನಾವು ಹೆಮ್ಮೆ ಪಡಬೇಕು. ಬೆಂಗಳೂರು ಕೇವಲ ನಗರವಲ್ಲ. ಇಡೀ ವಿಶ್ವ ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಿದೆ. ಇದು ಬೆಂಗಳೂರಿನ ಶಕ್ತಿ. ಬಾಗ್ಮನೆ ಕೂಡ ದೊಡ್ಡದಾಗಿ ಬೆಳೆದಿದ್ದು, ಸಾಕಷ್ಟು ಅವಕಾಶ ಕಲ್ಪಿಸಿದೆ. 200 ಮಿಲಿಯನ್ ಚದರಡಿಯಷ್ಟು ಎ ಗ್ರೇಡ್ ಕಚೇರಿ ಜಾಗವನ್ನು ಹೊಂದಿದೆ. ಇದು ಭಾರತದಲ್ಲೇ ಅತಿ ದೊಡ್ಡದಾಗಿದ್ದು, ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ” ಎಂದು ತಿಳಿಸಿದರು.

“ಕರ್ನಾಟಕವು ಪ್ರತಿ ವರ್ಷ 1 ಲಕ್ಷ ಐಟಿ ವೃತ್ತಿಪರರನ್ನು ಸೃಷ್ಟಿಸುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರ್ ವೃತ್ತಿಪರರಿದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಇಂಜಿನಿಯರ್ ವೃತ್ತಿಪರರಿದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಐಟಿ ಪಾರ್ಕ್ ಗಳು ಒಂದೇ ಪ್ರದೇಶದಲ್ಲಿದ್ದು, 16 ಕಿ.ಮೀ ಉದ್ದದ ರಸ್ತೆಯಲ್ಲೇ ಶೇ.80 ರಷ್ಟು ಅಂದರೆ, ಸುಮಾರು 16 ಲಕ್ಷ ಇಂಜಿನಿಯರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ವ್ಯವಸ್ಥೆ ದೇಶದ ಬೇರೆ ಯಾವುದೇ ಪ್ರದೇಶದಲ್ಲಿ ಇಲ್ಲ. ಇದು ಬೆಂಗಳೂರಿನ ಶಕ್ತಿ” ಎಂದು ಬಣ್ಣಿಸಿದರು.

ಬಾಗ್ಮನೆ ಸಂಸ್ಥೆ ಬೆಳವಣಿಗೆಯ ಪ್ರತಿ ಹೆಜ್ಜೆಯನ್ನು ನಾನು ನೋಡಿಕೊಂಡು ಬಂದಿದ್ದೇನೆ. ಸಂಸ್ಥೆಯ ಮಾಲೀಕರಾದ ರಾಜಾ ಹಾಗೂ ಅವರ ಕುಟುಂಬದವರು ಕೊಟ್ಟಿರುವ ನಂಬಿಕೆ ಅಪಾರವಾದುದು. ಈ ಸಂಸ್ಥೆ ಕರ್ನಾಟಕ ಮಾತ್ರವಲ್ಲ ದೇಶವೇ ಹೆಮ್ಮೆಪಡುವಂತೆ ಸಾಧನೆ ಮಾಡಿದೆ. ಹೀಗಾಗಿ ನಾನು ಅವರಿಗೆ ಶುಭಕೋರಲು ಇಲ್ಲಿಗೆ ಬಂದಿದ್ದೇನೆ. ನಾನು ಬೇರೆ ನಗರಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ನಾನು ಕೆಲ ತಿಂಗಳ ಹಿಂದೆ ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ದೆ. ಅಲ್ಲಿ ಅನೇಕ ಕಂಪನಿಗಳ ಜತೆ ಚರ್ಚೆ ಮಾಡಿದೆವು. ನಾವು ಅಲ್ಲೇ ಒಪ್ಪಂದಕ್ಕೆ ಸಹಿ ಹಾಕಲಿಲ್ಲ. ನೀವು ಬೆಂಗಳೂರಿಗೆ ಬಂದು ಅಲ್ಲಿನ ಹವಾಮಾನ, ಸಂಸ್ಕೃತಿ ಹಾಗೂ ಪ್ರತಿಭೆಗಳನ್ನು ಕಣ್ಣಾರೆ ನೋಡಿ ಆನಂತರ ಒಪ್ಪಂದ ಮಾಡಿಕೊಳ್ಳೋಣ ಎಂದು ಹೇಳಿದೆ. ಇಂತಹ ಪ್ರತಿಭಾ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ ಎಂದು ತಿಳಿಸಿದರು.

ಬಾಗ್ಮನೆ ಸಂಸ್ಥೆಯು ರಾಷ್ಟ್ರೀಯ ಷೇರು ವಿನಿಮಯಕ್ಕೆ ಉತ್ತಮ ಕೊಡುಗೆಯಾಗಲಿದ್ದು, ಎಲ್ಲಾ ಹೂಡಿಕೆದಾರರಿಗೆ ಹೆಮ್ಮೆ ತರುವ ವಿಶ್ವಾಸವಿದೆ. ಈ ಕ್ಷಣವನ್ನು ನಾವು ಬಾಗ್ಮನೆ ಪ್ರಗತಿ ಮಾತ್ರವಲ್ಲ ನಾವು ಬೆಂಗಳೂರು ಹಾಗೂ ಕರ್ನಾಟಕದ ಪ್ರಗತಿಯನ್ನು ಸಂಭ್ರಮಿಸುತ್ತಿದ್ದೇವೆ. ಕೆಲವು ನಗರಗಳು ಮೂಲಸೌಕರ್ಯಗಳಿಂದಾಗಿ ಪ್ರಗತಿ ಸಾಧಿಸಿದರೆ, ಮತ್ತೆ ಕೆಲವು ನಗರಗಳು ಆರ್ಥಿಕತೆ ನೀತಿಗಳ ಮೇಲೆ ಪ್ರಗತಿ ಸಾಧಿಸಿದರೆ, ಬೆಂಗಳೂರು ಪ್ರತಿಭಾವಂತ ಮಾನವ ಸಂಪನ್ಮೂಲಗಳಿಂದಾಗಿ ಪ್ರಗತಿ ಸಾಧಿಸುತ್ತಿದೆ ಎಂದರು.

ನಾನು ಒಮ್ಮೆ ರತನ್ ಟಾಟಾ ಅವರನ್ನು ಭೇಟಿಯಾಗಿದ್ದಾಗ, ಅವರು ಒಂದು ಮಾತು ಹೇಳಿದ್ದರು. ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಿ, ನೀವು ಬಹುದೂರ ಸಾಗಬೇಕಾದರೆ ಎಲ್ಲರೊಂದಿಗೆ ಸೇರಿ ಸಾಗಿ ಎಂದು ಹೇಳಿದ್ದರು. ಅದೇ ರೀತಿ ಬಾಗ್ಮನೆ ಸಂಸ್ಥೆ ಮಾಲೀಕರಾದ ರಾಜಾ ಅವರು ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುತ್ತಿದ್ದಾರೆ. ಆ ಮೂಲಕ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ತಿಳಿಸಿದರು.


Share

You cannot copy content of this page