ಸಮಗ್ರ ಸುದ್ದಿ

ರೋಬೋಟಿಕ್ ತಂತ್ರಜ್ಞಾನದ ಯಶಸ್ವಿ ಬಳಕೆ: 399 ಕಡೆ ರಸ್ತೆ ಅಗೆಯುವುದನ್ನು ತಪ್ಪಿಸಿ, ವಾಹನ ಸವಾರರ ಅನಾನುಕೂಲ ತಪ್ಪಿಸಿದ ಜಲಮಂಡಳಿ!

Share

ಬೆಂಗಳೂರು: ಬೆಂಗಳೂರು ಜಲಮಂಡಳಿ ಅಳವಡಿಸಿಕೊಂಡಿರುವ ರೊಬೋಟಿಕ್‌ ತಂತ್ರಜ್ಞಾನದ ಯಶಸ್ವಿ ಬಳಕೆಯನ್ನು ಮುಂದುವರೆಸಿದೆ. ಕಳೆದ ಆರು ತಿಂಗಳಲ್ಲಿ 32,661 ಮೀಟರ್‌ಗಳ ತಪಾಸಣೆ ನಡೆಸಿದ್ದು, 399 ಸ್ಥಳಗಳಲ್ಲಿ ರಸ್ತೆ ಅಗತೆವನ್ನು ತಪ್ಪಿಸಿದೆ. ಈ ಮೂಲಕ ಸಾರ್ವಜನಿಕರಿಗೆ ಅಗುತ್ತಿದ್ದ ತೊಂದರೆಯನ್ನು ತಪ್ಪಿಸಿದೆ.

ನಗರದ ಸಂಚಾರ ದಟ್ಟಣೆಗೆ ಕಿರಿಕಿರಿಯಾಗದಂತೆ ಹಾಗೂ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಿರುವ ಬೆಂಗಳೂರು ಜಲಮಂಡಳಿಯು, ಕಳೆದ ವರ್ಷ ನವೆಂಬರ್‌ ನಲ್ಲಿ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರು ಚಾಲನೆ ನೀಡಿದ್ದ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು (Robotic Technology) ಪೈಪ್‌ಲೈನ್ ಹಾಗೂ ಒಳಚರಂಡಿ ದೋಷಗಳನ್ನು ಪತ್ತೆಹಚ್ಚಲು ಯಶಸ್ವಿಯಾಗಿ ಬಳಸಿಕೊಂಡಿದೆ.

ಈ ವಿನೂತನ ತಂತ್ರಜ್ಞಾನದ ನೆರವಿನಿಂದ ಕಳೆದ ಆರು ತಿಂಗಳಲ್ಲಿ ನಗರದ ಬರೋಬ್ಬರಿ 399 ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆ ಅಗೆಯುವುದನ್ನು (Road Excavation) ತಪ್ಪಿಸಲಾಗಿದ್ದು, ಇದರಿಂದ ನಿತ್ಯ ನಗರದ ಪ್ರಯಾಣಿಕರು ಮತ್ತು ವಾಹನ ಸವಾರರು ಅನುಭವಿಸುತ್ತಿದ್ದ ಟ್ರಾಫಿಕ್ ಬವಣೆಗೆ ಬಹುದೊಡ್ಡ ಮಟ್ಟದಲ್ಲಿ ಮುಕ್ತಿ ಸಿಕ್ಕಿದೆ.

ಬೆಂಗಳೂರಿನಂತಹ ಮಹಾನಗರದಲ್ಲಿ ರಸ್ತೆ ಅಗೆಯುವುದು ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂಬುದು ನಮಗೆ ಅರಿವಿದೆ. ಈ ಹಿಂದೆ, ಪೈಪ್‌ಲೈನ್ ಸೋರಿಕೆ ಅಥವಾ ಒಳಚರಂಡಿ ದೋಷವನ್ನು ಪತ್ತೆಹಚ್ಚಲು ರಸ್ತೆಯುದ್ದಕ್ಕೂ ಅಗೆಯುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ನಿರ್ದೇಶನದಂತೆ ಅತ್ಯಾಧುನಿ ರೋಬೋಟಿಕ್ ತಂತ್ರಜ್ಞಾನವನ್ನು ಕಾರ್ಯಾಚರಣೆಗೆ ಅಳವಡಿಸಿಕೊಂಡಿದ್ದೇವೆ.

ಈ ಯಂತ್ರಗಳು ರಸ್ತೆಯನ್ನು ಅಗೆಯದೆಯೇ ಪೈಪ್‌ಲೈನ್ ಒಳಗೆ ಚಲಿಸಿ, ನಿಖರವಾಗಿ ದೋಷವನ್ನು ಪತ್ತೆಹಚ್ಚಿವೆ. ಇದರಿಂದ ಸತತ ಸುಮಾರು 32 ಕಿಲೋಮೀಟರ್‌ ವ್ಯಾಪ್ತಿಯ 399 ಕಡೆಗಳಲ್ಲಿ ರಸ್ತೆ ಅಗೆಯುವುದು ತಪ್ಪಿದ್ದು, ಸಾರ್ವಜನಿಕರಿಗೆ ತೊಂದರೆ ಆಗುವುದು ತಪ್ಪಿಸಲಾಗಿದೆ,” ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್‌ ಪ್ರಸಾತ್‌ ಮನೋಹರ್ ತಿಳಿಸಿದ್ದಾರೆ.

ಕಾರ್ಯಾಚರಣೆಯ ಪ್ರಮುಖ ಅಂಕಿ-ಅಂಶಗಳು:

32 ಕಿ.ಮೀ ರೋಬೋಟಿಕ್ ತಪಾಸಣೆ: ಜಲಮಂಡಳಿಯ ರೋಬೋಟ್‌ಗಳು ಪೈಪ್‌ಲೈನ್ ಒಳಗೆ ಬರೋಬ್ಬರಿ 32,661 ಮೀಟರ್ (ಸುಮಾರು 32.66 ಕಿ.ಮೀ) ಉದ್ದದ ಮಾರ್ಗವನ್ನು ಕ್ರಮಿಸಿ ಅತ್ಯಂತ ವೈಜ್ಞಾನಿಕವಾಗಿ ತಪಾಸಣೆ ನಡೆಸಿವೆ.

ನಿಖರ ದೋಷ ಪತ್ತೆ: ಈ ರೋಬೋಟಿಕ್ ತಪಾಸಣೆಯ ವೇಳೆ ಒಟ್ಟಾರೆ 394 ದೋಷಗಳನ್ನು ಅತ್ಯಂತ ನಿಖರವಾಗಿ ಗುರುತಿಸಿ, ರಸ್ತೆಗಳಿಗೆ ಹೆಚ್ಚು ಹಾನಿಯಾಗದಂತೆ ಕರಾರುವಕ್ಕಾಗಿ ಅವುಗಳಿಗೆ ಪರಿಹಾರ ಕಲ್ಪಿಸಲಾಗಿದೆ.

ತ್ವರಿತ ಸ್ಪಂದನೆ: ಈ ಆರು ತಿಂಗಳ ಅವಧಿಯಲ್ಲಿ ಬಂದಿದ್ದ ಒಟ್ಟು 404 ದೂರುಗಳ ಪೈಕಿ 399 ದೂರುಗಳನ್ನು ಈಗಾಗಲೇ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಬಾಕಿ ಉಳಿದಿರುವ ಕೇವಲ 5 ದೂರುಗಳನ್ನು ಸಹ ಆದ್ಯತೆಯ ಮೇರೆಗೆ ಶೀಘ್ರವೇ ಬಗೆಹರಿಸಲಾಗುವುದು.

ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಜೊತೆಗೆ, ನಗರದ ಮೂಲಸೌಕರ್ಯಗಳಿಗೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಎಚ್ಚರವಹಿಸುವುದು ಜಲಮಂಡಳಿಯ ಬದ್ಧತೆಯಾಗಿದೆ. ಮುಂದಿನ ದಿನಗಳಲ್ಲೂ ಇಂತಹ ಜನಸ್ನೇಹಿ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ನಾವು ಮುಂದುವರಿಸಲಿದ್ದೇವೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.


Share

You cannot copy content of this page