ಬೆಂಗಳೂರು: ಬೆಂಗಳೂರಿನ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿ ಸುಗಮ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು, ಸೈಬರ್ ಸುರಕ್ಷತೆ ಹೆಚ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಪೊರೇಟ್ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಸಿಸಿಐಆರ್‌ಇ ಎಫ್‌ಎಂ ಆ್ಯಂಡ್ ಸಿಆರ್, ಭಾರತೀಯ ಅರ್ಬನ್ ಸಹಭಾಗಿತ್ವದಲ್ಲಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಇಂಟಿಗ್ರೇಟೆಡ್ ವರ್ಕ್‌ಸ್ಪೇಸಸ್ ಫೋರಮ್-ನಲ್ಲಿ ಅವರು ಮಾತನಾಡುತ್ತಿದ್ದರು.
ಉದ್ಯಮದ ಮುಖಂಡರು, ವಾಣಿಜ್ಯ ರಿಯಲ್ ಎಸ್ಟೇಟ್ ಡೆವಲಪರ್‌ಗಳು, ಕೆಲಸದ ಸ್ಥಳ ತಂತ್ರಜ್ಞರು, ಸೌಲಭ್ಯ ನಿರ್ವಹಣಾ ವೃತ್ತಿಪರರು, ತಂತ್ರಜ್ಞಾನ ನಾವೀನ್ಯಕಾರರು ಮತ್ತು ಸುಸ್ಥಿರತೆ ತಜ್ಞರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಸಭಿಕರ ಪ್ರಶ್ನೆಗಳಿಗೆ ಉತ್ತರಿಸುತ್ತ ಭವಿಷ್ಯದ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಆದ್ಯತೆ ಮೇರೆಗೆ ಹಮ್ಮಿಕೊಳ್ಳಬೇಕಾದ ಕ್ರಮಗಳ ಬಗೆಗಿನ ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಸಭೆ ಉದ್ದೇಶಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಾಗರಿಕರ ಜೀವನದ ಗುಣಮಟ್ಟ ಸುಧಾರಿಸುವುದರ ಜೊತೆಗೆ ಆರ್ಥಿಕ ಬೆಳವಣಿಗೆ ಬೆಂಬಲಿಸುವ ಭವಿಷ್ಯಕ್ಕೆ ಸಿದ್ಧವಾಗಿರುವ ಪೂರಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯ ಇದೆ. ಸಮೂಹ ಸಾರಿಗೆ ಸೌಲಭ್ಯವೂ ಸೇರಿದಂತೆ ವಾಹನಗಳ ಸಂಚಾರ ವ್ಯವಸ್ಥೆ ಸುಧಾರಿಸುವ, ಸೈಬರ್ ಸುರಕ್ಷತೆ ಹೆಚ್ಚಿಸುವ ಮತ್ತು ಸುಸ್ಥಿರ ನಗರಾಭಿವೃದ್ಧಿ ಕಾರ್ಯಕ್ರಮಗಳು ಬೆಂಗಳೂರಿನ ನಿರಂತರ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಗೆ ಮಹತ್ವದ ಕೊಡುಗೆ ನೀಡಲಿವೆ.
ಬಂಡವಾಳ ಹೂಡಿಕೆ, ಪ್ರತಿಭಾನ್ವಿತ ತಂತ್ರಜ್ಞರು ಮತ್ತು ನಾವೀನ್ಯತೆ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿ ಇರುವ ನಗರದಲ್ಲಿ ದಕ್ಷ ಸಾರಿಗೆ ಸೌಲಭ್ಯ, ಸೈಬರ್ ಸ್ಥೈರ್ಯ ಬಲಪಡಿಸುವ ಮತ್ತು ನಾಗರಿಕರ ಜೀವನ ಗುಣಮಟ್ಟ ಹೆಚ್ಚಿಸುವ ಸುಸ್ಥಿರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದರತ್ತ ಹೆಚ್ಚು ಗಮನ ನೀಡಬೇಕಾದ ತುರ್ತು ಎದುರಾಗಿದೆ. ಮುಂಬರುವ ದಿನಗಳಲ್ಲೂ ತಂತ್ರಜ್ಞಾನ, ನಾವೀನ್ಯತೆ ಮತ್ತು ಹೂಡಿಕೆಗಾಗಿ ಬೆಂಗಳೂರು ವಿಶ್ವದ ಪ್ರಮುಖ ತಾಣಗಳಲ್ಲಿ ಒಂದಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥಿತ ಮತ್ತು ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳಲು ನಾವು ಬದ್ಧರಾಗಿರಬೇಕು ಎಂದರು.
ನಗರವು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ವಾಹನ ಸಂಚಾರ ಸಮಸ್ಯೆ ಪ್ರಮುಖವಾಗಿದೆ. ನಗರವು 1.5 ಕೋಟಿ ಜನಸಂಖ್ಯೆ ಮತ್ತು 1.25 ಕೋಟಿಗೂ ಹೆಚ್ಚು ವಾಹನಗಳಿಗೆ ನೆಲೆಯಾಗಿದೆ. ತಂತ್ರಜ್ಞಾನ ಹಾಗೂ ದತ್ತಾಂಶ ಆಧಾರಿತ ವಾಹನ ಸಂಚಾರ ಪರಿಹಾರಗಳನ್ನು ಜಾರಿಗೊಳಿಸುವ ಅಗತ್ಯ ಹೆಚ್ಚಿದೆ. ಸಾರಿಗೆ ಸಂಪರ್ಕ ಹೆಚ್ಚಿಸುವ, ದಟ್ಟಣೆ ತಗ್ಗಿಸುವ, ನಗರದ ಸುಸ್ಥಿರ ಬೆಳವಣಿಗೆಗೆ ಬೆಂಬಲ ನೀಡುವ ಯೋಜನೆ ಕಾರ್ಯಗತಗೊಳಿಸುವ, ಸಮನ್ವಯ ಸಾಧಿಸುವಂತಹ ದೀರ್ಘಾವಧಿ ಯೋಜನೆ ಜಾರಿಗೊಳಿಸಬೇಕಾಗಿದೆ ಎಂದರು.
ತ್ವರಿತ ಬೆಳವಣಿಗೆ ದಾಖಲಿಸುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ಸೈಬರ್ ಅಪರಾಧವೂ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಬೆಂಗಳೂರು ವಿಶ್ವದ ಪ್ರಮುಖ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ನಿರಂತರವಾಗಿ ಬೆಳೆಯುತ್ತಿದೆ. ಹೆಚ್ಚುತ್ತಿರುವ ಡಿಜಿಟಲ್ ಬೆದರಿಕೆಗಳನ್ನು ಎದುರಿಸಲು ನಗರವಾಸಿಗಳಲ್ಲಿ ಸೈಬರ್ ತಿಳಿವಳಿಕೆ ಮೂಡಿಸುವ, ಪ್ರತಿಕೂಲತೆ ಎದುರಿಸುವ ಸಾಮರ್ಥ್ಯ ಹೆಚ್ಚಿಸುವ ಹಾಗೂ ಇತರ ಸಂಘಟಿತ ಪ್ರಯತ್ನಗಳ ಅಗತ್ಯ ಇದೆ ಎಂದರು.
ಬೆಂಗಳೂರಿನ ಭವಿಷ್ಯದ ಅಗತ್ಯಗಳನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ನಗರದ ಬೆಳವಣಿಗೆಯು ಸುಸ್ಥಿರ, ಎಲ್ಲರನ್ನೂ ಒಳಗೊಳ್ಳುವ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವಂತೆ ನೋಡಿಕೊಳ್ಳುವ ಅಗತ್ಯ ಇದೆ, ಜಾಗತಿಕ ಹೂಡಿಕೆ, ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ನಿರಂತರವಾಗಿ ಆಕರ್ಷಿಸುತ್ತಲೇ ಇರುವಾಗ, ನಗರಾಭಿವೃದ್ಧಿಯು ದೀರ್ಘಾವಧಿಯ ಯೋಜನೆ, ಪೂರಕ ಮೂಲಸೌಕರ್ಯ ಮತ್ತು ನಾಗರಿಕರಿಗೆ ವಾಸಯೋಗ್ಯತೆ ಹೆಚ್ಚಿಸುವ ಸುಸ್ಥಿರ ಪರಿಹಾರಗಳನ್ನೂ ಒಳಗೊಂಡಿರಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.
ನಗರೀಕರಣ ಸವಾಲುಗಳ ವಿಸ್ತೃತ ಚರ್ಚೆ
ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಬೆಂಗಳೂರಿನ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸುಸಜ್ಜಿತ ಕೆಲಸದ ಸ್ಥಳಗಳು, ನಗರ ಮೂಲಸೌಕರ್ಯ, ಸುಸ್ಥಿರ ಅಭಿವೃದ್ಧಿ, ನಾವೀನ್ಯತೆ ಮತ್ತು ನಗರೀಕರಣದ ಹೊಸ ಸವಾಲುಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆಗಳು ನಡೆದವು. ಭವಿಷ್ಯದ ಬೆಂಗಳೂರು ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸುಸಜ್ಜಿತ ಕೆಲಸದ ಸ್ಥಳಗಳು ವಹಿಸಬಹುದಾದ ಪ್ರಮುಖ ಪಾತ್ರದ ಕುರಿತೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ವಾಣಿಜ್ಯ ಕಟ್ಟಡಗಳು, ಕೆಲಸ ಸ್ಥಳಗಳ ವಿನ್ಯಾಸ, ತಂತ್ರಜ್ಞಾನ, ಸುಸ್ಥಿರ ಅಭಿವೃದ್ಧಿ ಮತ್ತು ನಗರ ಯೋಜನೆಗಳ ನಡುವೆ ಸಮನ್ವಯತೆಯ ಮಹತ್ವವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು.
ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾದ ಕಚೇರಿ ಪರಿಸರ ಹಾಗೂ ವಾಣಿಜ್ಯ ವಹಿವಾಟು ಕೇಂದ್ರಗಳು- ನಾವೀನ್ಯತೆ, ಉತ್ಪಾದಕತೆ, ಪ್ರತಿಭೆಗಳ ಆಕರ್ಷಣೆ ಹಾಗೂ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಹೇಗೆ ಸಹಕಾರಿಯಾಗುತ್ತವೆ ಎಂಬುದರ ಕುರಿತೂ ಚರ್ಚೆ ನಡೆಯಿತು.
“”ತಂತ್ರಜ್ಞಾನ, ನಾವೀನ್ಯತೆ ಮತ್ತು ಹೂಡಿಕೆಗಾಗಿ ಬೆಂಗಳೂರು ವಿಶ್ವದ ಪ್ರಮುಖ ತಾಣಗಳಲ್ಲಿ ಒಂದಾಗಿ ಭವಿಷ್ಯದಲ್ಲಿಯೂ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು, ದೀರ್ಘಾವಧಿಯ ಸುವ್ಯವಸ್ಥಿತ ಪರಿಹಾರ ಕಂಡುಕೊಳ್ಳಲು ನಾವು ಬದ್ಧತೆ ತೋರಬೇಕು ಎಂದು ಗೃಹ, ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.“”
