ಬೆಂಗಳೂರು: ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ಕರಾವಳಿ ಪ್ರದೇಶದಲ್ಲೇ ರಾಜ್ಯ ಸಚಿವ ಸಂಪುಟ (ಕ್ಯಾಬಿನೆಟ್) ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಉನ್ನತ ಮಟ್ಟದ ಕರಾವಳಿ ಪ್ರವಾಸೋದ್ಯಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜತೆಗೆ, ಈ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದರು.
ತಾಂತ್ರಿಕ ತಕರಾರುಗಳಿಗೆ 15-20 ದಿನಗಳಲ್ಲಿ ಪರಿಹಾರ: ಸಿಎಂ ಗಡುವು
”ಕರಾವಳಿಯಲ್ಲಿ ಕ್ಯಾಬಿನೆಟ್ ಸಭೆ ನಡೆಸುವಷ್ಟರೊಳಗೆ ಅಲ್ಲಿನ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸಿದ್ಧವಿರಬೇಕು,” ಎಂದು ಸಿಎಂ ತಾಕೀತು ಮಾಡಿದರು.
ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಮತ್ತು ಅರಣ್ಯ ಇಲಾಖೆಯಿಂದ ಆಗುತ್ತಿರುವ ತಾಂತ್ರಿಕ ತಕರಾರುಗಳ ಬಗ್ಗೆ ಮುಂದಿನ 15-20 ದಿನಗಳಲ್ಲಿ ಸಂಪೂರ್ಣ ವರದಿ ಸಿದ್ಧಪಡಿಸಿ, ಸಮಸ್ಯೆ ಹಾಗೂ ಅದಕ್ಕಿರುವ ಸೂಕ್ತ ಪರಿಹಾರಗಳನ್ನು ತರಬೇಕೆಂದು ಅಧಿಕಾರಿಗಳಿಗೆ ಗಡುವು ನೀಡಿದರು.
ಹೂಡಿಕೆದಾರರಿಗೆ ಸುಗಮ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು. ಉದ್ಯಮಿಗಳಿಗೆ ಆಗುತ್ತಿರುವ ಇಲಾಖಾವಾರು ಕಿರಿಕಿರಿಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಖಡಕ್ ನಿರ್ದೇಶನ ನೀಡಿದರು. ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ತೊಂದರೆ ಆಗದಂತೆ ವಿವಿಧ ಇಲಾಖೆಗಳ ಅನುಮತಿಗಳನ್ನು ಪಡೆಯಲು ‘ಏಕ ಗವಾಕ್ಷಿ’ (ಸಿಂಗಲ್ ವಿಂಡೋ) ವ್ಯವಸ್ಥೆ ಜಾರಿಗೆ ತರಲು ಮುಖ್ಯಮಂತ್ರಿಗಳು ಒಲವು ವ್ಯಕ್ತಪಡಿಸಿದರು.
45 ಯೋಜನೆಗಳಿಂದ 4,500 ಉದ್ಯೋಗ ಸೃಷ್ಟಿ
ಕರ್ನಾಟಕ ಪ್ರವಾಸೋದ್ಯಮ ನೀತಿಯಡಿಯಲ್ಲಿ ಕರಾವಳಿ ಭಾಗದಲ್ಲಿ ಪ್ರಸ್ತುತ 718.63 ಕೋಟಿ ರೂಪಾಯಿ ಅಂದಾಜು ಹೂಡಿಕೆಯ 45 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಸುಮಾರು 4,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಅಂಶವನ್ನು ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, ಈ ಉದ್ಯೋಗ ಸೃಷ್ಟಿಯ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎಂದರು.
ಭಾರತದಲ್ಲೇ ಅತ್ಯಂತ ಸುಂದರ ಹಾಗೂ ಸುದೀರ್ಘ ಸಮುದ್ರ ತೀರಗಳನ್ನು ಹೊಂದಿರುವ ಹೆಗ್ಗಳಿಕೆ ನಮ್ಮ ರಾಜ್ಯಕ್ಕಿದೆ. ಪರಿಸರಕ್ಕೆ ಯಾವುದೇ ಧಕ್ಕೆ ಬಾರದಂತೆ ಈ ಸಮುದ್ರ ತೀರಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.
ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು:
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾಕಾರಗೊಳಿಸಲು ಮತ್ತು ಹೆಚ್ಚಿನ ಬಂಡವಾಳವನ್ನು ಆಕರ್ಷಿಸಲು ಉದ್ಯಮಿಗಳಿಗೆ ಸಹಾಯಧನ (ಸಬ್ಸಿಡಿ), ಬಡ್ಡಿ ಸಹಾಯಧನ ಹಾಗೂ ವಿವಿಧ ರಿಯಾಯ್ತಿಗಳ ಮೂಲಕ ಪ್ರೋತ್ಸಾಹ ನೀಡಲು ಮುಖ್ಯಮಂತ್ರಿಗಳು ಒತ್ತು ನೀಡಿದರು. ಕರಾವಳಿ ಮೇಳಗಳು, ಉತ್ಸವಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ಮಾರ್ಕೆಟಿಂಗ್ ಮೂಲಕ ಇಲ್ಲಿನ ಸಂಸ್ಕೃತಿ, ಆಚರಣೆ ಹಾಗೂ ಹೆಮ್ಮೆಯನ್ನು ಜಗತ್ತಿಗೆ ಪರಿಚಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಚಲನಚಿತ್ರ ರಂಗ ಹಾಗೂ ಹೆಲಿ ಟೂರಿಸಂಗೆ ಉತ್ತೇಜನ: ರಿಷಬ್ ಶೆಟ್ಟಿ ಮನವಿ
ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಾತನಾಡಿ, “ಕರಾವಳಿಯ ಜನಪದ ಕಲೆ ಹಾಗೂ ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸಿನಿಮಾ ಚಿತ್ರೀಕರಣಕ್ಕೆ ಕರಾವಳಿ ಭಾಗದಲ್ಲಿ ಹೆಚ್ಚಿನ ಸೌಲಭ್ಯ ಹಾಗೂ ಅನುಕೂಲ ಕಲ್ಪಿಸಿಕೊಡುವುದರಿಂದ ಕೇರಳ-ಗೋವಾ-ಕರ್ನಾಟಕದ ಸಿನಿಮಾ ಜಗತ್ತಿಗೆ ಅತ್ಯಂತ ದೊಡ್ಡ ಕೊಡುಗೆ ಸಿಗಲಿದೆ,” ಎಂದು ವಿನಂತಿಸಿದರು.
ಇದೇ ವೇಳೆ ಕರಾವಳಿಯಲ್ಲಿ ಪ್ರವಾಸೋದ್ಯಮ ವೇಗಗೊಳಿಸಲು ‘ಹೆಲಿ ಟೂರಿಸಂ’ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಉದ್ಯಮಿಗಳು ಸಿಎಂಗೆ ಮನವಿ ಮಾಡಿದರು.
ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ ಜೆ ಜಾರ್ಜ್, ಶಾಸಕರಾದ ಜಿ ಟಿ ದೇವೇಗೌಡ, ಸತೀಶ್ ಸೈಲ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.
