ಬೆಂಗಳೂರು:ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು 2026-27ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್‍ಗಳಲ್ಲಿ ಪ್ರಯಾಣಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಸರ್ಕಾರ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಅಷ್ಟೇ ಅಲ್ಲದೆ, ಈಗಾಗಲೇ ಶುಲ್ಕ ಪಾವತಿಸಿ ಬಸ್ ಪಾಸ್ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಅವರು ಪಾವತಿಸಿರುವ ಮೊತ್ತವನ್ನು ಪೂರ್ಣವಾಗಿ ಮರುಪಾವತಿ ಮಾಡಲು ನಿರ್ಧರಿಸಲಾಗಿದೆ.
ಸರ್ಕಾರದ ಈ ಉಚಿತ ಬಸ್ ಪಾಸ್ ಸೌಲಭ್ಯವು ರಾಜ್ಯದ ನಾಲ್ಕು ಪ್ರಮುಖ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಗೆ ಅನ್ವಯವಾಗುತ್ತದೆ.
ವಿದ್ಯಾರ್ಥಿಗಳು ದಿನಾಂಕ 29-05-2026 ರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಹಣ ಪಾವತಿಸಿ ಪಾಸ್ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಹಣವನ್ನು ಮರಳಿ ಪಡೆಯಲು ಸೇವಾಸಿಂಧು ಪೋರ್ಟಲ್‍ನ ಅಧಿಕೃತ ಲಿಂಕ್ https://sevasindhuservices.karnataka.gov.in/buspassservices/ ಗೆ ಭೇಟಿ ನೀಡಿ, ತಮ್ಮ ಮೊಬೈಲ್ ಸಂಖ್ಯೆ ಹಾಗೂ ಒಟಿಪಿ ನಮೂದಿಸಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ತಮ್ಮ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
ಅರ್ಜಿ ನಮೂನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಥವಾ ತಮ್ಮ ಪೋಷಕರ ಬ್ಯಾಂಕ್ ಖಾತೆಯ ನಿಖರ ವಿವರಗಳನ್ನು ದಾಖಲಿಸಬೇಕು. ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ವಿದ್ಯಾರ್ಥಿ/ಪೋಷಕರ ಬ್ಯಾಂಕ್ ಖಾತೆಗೆ NEFT ಅಥವಾ RTGS ಮೂಲಕ ನೇರವಾಗಿ ಹಣ ಜಮೆಯಾಗಲಿದೆ.
ಹಣ ಯಶಸ್ವಿಯಾಗಿ ಪಾವತಿಯಾದ ನಂತರ ವಿದ್ಯಾರ್ಥಿಗಳ ಮೊಬೈಲ್‍ಗೆ ಎಸ್‍ಎಂಎಸ್ ಸಂದೇಶ ಬರಲಿದೆ. ಇಡೀ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‍ಲೈನ್ ಮೂಲಕವೇ ನಡೆಯುವುದರಿಂದ, ವಿದ್ಯಾರ್ಥಿಗಳು ಹಣ ಮರುಪಾವತಿಗಾಗಿ ಯಾವುದೇ ಸಾರಿಗೆ ಸಂಸ್ಥೆಯ ಕೌಂಟರ್ ಅಥವಾ ಕಚೇರಿಗಳಿಗೆ ಅಲೆಯುವ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಥಿಗಳು ಈ ಕೂಡಲೇ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಪಾಸ್ ಕರಡಿನ ಹಣವನ್ನು ಮರಳಿ ಪಡೆಯಲು ಕೆಎಸ್‍ಆರ್ ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
