ಬೆಂಗಳೂರು :ಮಾಧ್ಯಮ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ, ಪ್ರಖರ ವೈಚಾರಿಕ ಚಿಂತಕ ಎನ್. ಎಸ್. ಶಂಕರ್ ಅವರ ನಿಧನಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಎನ್. ಎಸ್. ಶಂಕರ್ ಅವರು ಕೇವಲ ಪತ್ರಕರ್ತರಾಗಿರಲಿಲ್ಲ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಮುಖ ಧ್ವನಿಯಾಗಿದ್ದರು. ಲಂಕೇಶ್ ಪತ್ರಿಕೆ, ಪ್ರಜಾವಾಣಿ, ಮುಂಗಾರು, ಸುದ್ದಿ ಸಂಗಾತಿ ಹಾಗೂ ಸುದ್ದಿ ಟಿವಿಯಲ್ಲಿ ಕಾರ್ಯ ನಿರ್ವಹಿಸಿದ್ದ ಅವರು ಚಲನಚಿತ್ರ ಸಂಭಾಷಣೆ ಕ್ಷೇತ್ರದಲ್ಲೂ ಹೆಸರು ಗಳಿಸಿದ್ದರು.
ವಿವಿಧ ಮುಂಚೂಣಿ ಪತ್ರಿಕೆಗಳಲ್ಲಿ ಅವರು ನಿರ್ವಹಿಸಿದ ಜವಾಬ್ದಾರಿ ಹಾಗೂ ಅವರ ಬರಹಗಳು ಸದಾ ಸ್ಮರಣೀಯ. ಚಲನಚಿತ್ರ ನಿರ್ದೇಶನ, ಅನುವಾದ ಹಾಗೂ ಸಾಹಿತ್ಯ ಕ್ಷೇತ್ರದಲ್ಲೂ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಮಾಧ್ಯಮ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ, ಹಾಗೂ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಪ್ರಾರ್ಥಿಸುತ್ತಾ ವಾರ್ತಾ ಇಲಾಖೆ ಆಯುಕ್ತರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
