ಬೆಂಗಳೂರು: 29ನೇ ಬೆಂಗಳೂರು ಟೆಕ್ ಸಮಿಟ್–2026ರ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಚೆನ್ನೈನಲ್ಲಿ ಆಯೋಜಿಸಿದ್ದ ಉದ್ಯಮ ಸಂವಾದಕ್ಕೆ ತಂತ್ರಜ್ಞಾನ ಮತ್ತು ಉದ್ಯಮ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 300ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ, ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಪಾಲ್ಗೊಳ್ಳುವಿಕೆ, ಹೂಡಿಕೆ ಹಾಗೂ ಸಹಯೋಗದ ಅವಕಾಶಗಳ ಕುರಿತು ಚರ್ಚಿಸಿದವು.
‘ಎಐ & ಬಿಯಾಂಡ್’ ಧ್ಯೇಯವಾಕ್ಯದೊಂದಿಗೆ ನವೆಂಬರ್ 17ರಿಂದ 19ರವರೆಗೆ ಬೆಂಗಳೂರಿನ ಬಿಐಇಸಿಯಲ್ಲಿ ನಡೆಯಲಿರುವ ಸಮಿಟ್‌ನಲ್ಲಿ 75ಕ್ಕೂ ಹೆಚ್ಚು ದೇಶಗಳು, 30ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 1,800ಕ್ಕೂ ಹೆಚ್ಚು ಪ್ರದರ್ಶಕರು, 25,000ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 1,000ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಭಾಗವಹಿಸುವ ನಿರೀಕ್ಷೆಯಿದೆ.
ಕರ್ನಾಟಕದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮಾತನಾಡಿ ಚೆನ್ನೈ ಮತ್ತು ಕರ್ನಾಟಕದ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು.
ಸಮಿಟ್‌ನಲ್ಲಿ ಎಐ, ಡೀಪ್‌ಟೆಕ್, ಫಿನ್‌ಟೆಕ್, ಬಯೋಟೆಕ್, ಸ್ಪೇಸ್‌ಟೆಕ್, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳು ಸೇರಿದಂತೆ ಹಲವು ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಸ್ಟಾರ್ಟಪ್‌ಗಳಿಗೆ ಹೂಡಿಕೆದಾರರು, ಮಾರ್ಗದರ್ಶಕರು ಮತ್ತು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕ ಕಲ್ಪಿಸುವ ಫ್ಯೂಚರ್ ಮೇಕರ್ಸ್ ಕಾರ್ಯಕ್ರಮವೂ ನಡೆಯಲಿದೆ.
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ ಹಾಗೂ ಎಸ್‌ಟಿಪಿಐ ಸಹಯೋಗದಲ್ಲಿ ಬೆಂಗಳೂರು ಟೆಕ್ ಸಮಿಟ್–2026 ಆಯೋಜಿಸಲಾಗುತ್ತಿದೆ.
