ಸಮಗ್ರ ಸುದ್ದಿ

ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಸಿಎಂ ಅವರಿಂದ ಉದ್ಘಾಟನೆ – ಸಚಿವ ಎನ್. ಚಲುವರಾಯಸ್ವಾಮಿ

Share

ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಕೆಆರ್‌ಎಸ್‌ನಲ್ಲಿ ಅಕ್ಟೋಬರ್ 11ರಿಂದ ಸಂಪ್ರದಾಯಬದ್ಧ ಕಾವೇರಿ ಆರತಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ವಿಕಾಸಸೌಧದಲ್ಲಿ ಬುಧವಾರ ಕಾವೇರಿ ಆರತಿ ಆಯೋಜನೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಕಾವೇರಿ ಆರತಿ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೇ ಬಳಸಿಕೊಂಡು ಸಂಪ್ರದಾಯಬದ್ಧವಾಗಿ, ಯಾವುದೇ ಲೋಪವಿಲ್ಲದೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾವೇರಿ ಆರತಿಯನ್ನು ಅರ್ಥಪೂರ್ಣವಾಗಿ ನೆರವೇರಿಸಬೇಕು. ಈ ಹಿಂದೆ ಅವರೇ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಆರಂಭಿಸಿದ್ದ ಈ ಕಾರ್ಯಕ್ರಮವನ್ನು ಈ ಬಾರಿ ಇನ್ನಷ್ಟು ಅರ್ಥಪೂರ್ಣವಾಗಿ ಆಯೋಜಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕಳೆದ ವರ್ಷ ಮೊದಲ ಬಾರಿಗೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಆರಂಭಿಸಲಾಗಿತ್ತು. ಇಂತಹ ಸಾಂಪ್ರದಾಯಿಕ ಆಚರಣೆಗಳು ನಿಲ್ಲಬಾರದು ಎಂಬ ಸದುದ್ದೇಶದಿಂದ ಈ ವರ್ಷವೂ ಮುಂದುವರಿಸಲಾಗುತ್ತಿದೆ. ರಾಜ್ಯದಲ್ಲಿ ಬರ ಮತ್ತು ತಮಿಳುನಾಡು ನೀರು ಹಂಚಿಕೆ ವಿವಾದಗಳಿದ್ದರೂ, ನಾಡಿನ ಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಅಕ್ಟೋಬರ್ 11ರಿಂದ ಆರಂಭವಾಗಲಿರುವ ಕಾವೇರಿ ಆರತಿ ಒಟ್ಟು 6 ದಿನಗಳ ಕಾಲ ಜರುಗಲಿದೆ.

ಪಾರ್ಕಿಂಗ್ ಸ್ಥಳದಿಂದ ವೇದಿಕೆವರೆಗೂ ಉಚಿತ ಬಸ್ ಸೌಲಭ್ಯ, ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣ, ವಾರ್ತಾ ಇಲಾಖೆಯಿಂದ ಪ್ರಚಾರ, ಮುಜರಾಯಿ ಇಲಾಖೆಯಿಂದ ಪಂಡಿತರ ನೇಮಕ, ಎಲ್‌ಇಡಿ ಪರದೆಗಳು, ಭವ್ಯ ವೇದಿಕೆ, ಧ್ವನಿ-ಬೆಳಕು ವ್ಯವಸ್ಥೆ, ವಾದ್ಯ, ಪೂಜಾ ಪರಿಕರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿರಬೇಕು. ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಮತ್ತು ಕಳೆದ ಬಾರಿಯ ಲೋಪದೋಷಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

ಮುಖ್ಯಮಂತ್ರಿಗಳು ಆಗಮಿಸುವುದರಿಂದ ‘ಡಿ-ಝೋನ್’ ಭದ್ರತಾ ನಿಯಮಗಳ ಪಾಲನೆಯಾಗಬೇಕು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.

ವಿಡಿಯೋ ಕರೆ ಮೂಲಕ ಸಲಹೆ

ಕಳೆದ ಬಾರಿಯ ಕಾವೇರಿ ಆರತಿಯ ಮೇಲ್ವಿಚಾರಣೆ ವಹಿಸಿದ್ದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಸಮಾಲೋಚನೆ ನಡೆಸಿದ ಸಚಿವರು, ಈ ವರ್ಷವೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ 6 ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸುವಂತೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು.

ಸಭೆಯಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ, ಪೂಜಾ ವಿಧಿವಿಧಾನಗಳು, ವಾರಣಾಸಿಯ ಅರ್ಚಕರ ತಂಡದ ವಾಸ್ತವ್ಯ ಮೊದಲಾದ ವಿವರಗಳನ್ನು ಪರಿಶೀಲಿಸಲಾಯಿತು. 6 ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ, ಹಾಸ್ಯ ಸಂಜೆ ನಡೆಯಲಿದೆ.

ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ. ಸಿಇಒ ನಂದಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತೆ ಮಂಜುಶ್ರೀ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಉಪಸ್ಥಿತರಿದ್ದರು.


Share

You cannot copy content of this page