ಬೆಂಗಳೂರು: ಬರಪೀಡಿತ ತಾಲೂಕು ಘೋಷಣೆಗೆ ಕೇಂದ್ರ ಸರ್ಕಾರ 2020ರಲ್ಲಿ ರೂಪಿಸಿರುವ ಕೈಪಿಡಿಯ ಅಂಶಗಳು ಮತ್ತು ಷರತ್ತುಗಳು ಅವೈಜ್ಞಾನಿಕವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ವಿಧಾನಪರಿಷತ್ತಿನಲ್ಲಿಂದು ಪ್ರತಿಪಾದಿಸಿದ್ದಾರೆ.
ಬರ ಕುರಿತ ಚರ್ಚೆಯ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು 3 ವಾರಗಳ ಕಾಲ ಶುಷ್ಕ ವಾತಾವರಣ ಇರಬೇಕು, ಮಳೆ ಆಗಿರಬಾರದು, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಬಿತ್ತನೆ ಆಗಿರಬಾರದು ಎಂಬೆಲ್ಲಾ ಷರತ್ತುಗಳಿವೆ ಎಂದರು.
ಉಪಗ್ರಹ ಆಧಾರಿತವಾಗಿ ಸಂಗ್ರಹಿಸುವ ಈ ಅಂಶಗಳ ಆಧಾರದ ಮೇಲೆ ರಾಜ್ಯ ಮತ್ತು ಕೇಂದ್ರದ ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗದ ತಾಂತ್ರಿಕ ತಂಡ ವರದಿ ಪರಿಶೀಲಿಸುತ್ತದೆ. ಜೊತೆಗೆ ದೂರಸಂವೇದಿ ತಂತ್ರಜ್ಞಾನವನ್ನೂ ಬಳಕೆ ಮಾಡುತ್ತದೆ. ಮಣ್ಣಿನ ತೇವಾಂಶದ ಪರಾಮರ್ಶೆ ಮಾಡುತ್ತದೆ. ಬೀಜ ಮೊಳಕೆ ಒಡೆದಿದೆಯೋ ಇಲ್ಲವೋ ಎಂಬ ಪರಾಮರ್ಶೆಯೂ ಆಗುತ್ತದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ 12 ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಬರೆದಿದ್ದರು, ಈಗಲೂ ಕೇಂದ್ರ ಕೃಷಿ ಸಚಿವರಿಗೆ ಈ ನಿಯಮಗಳನ್ನು ಸರಳೀಕರಣ ಮಾಡುವಂತೆ ಪತ್ರ ಬರೆದು ಮನವಿ ಮಾಡಲಾಗಿದೆ. ಕೇಂದ್ರದ ಈ ಕೈಪಿಡಿಯ ನಿಯಮಗಳಿಂದ ಕರ್ನಾಟಕ ರಾಜ್ಯ ಮಾತ್ರವಲ್ಲ ದೇಶಾದ್ಯಂತ ಎಲ್ಲ ರಾಜ್ಯದಲ್ಲೂ, ಬಿಜೆಪಿ ಆಡಳಿತ ರಾಜ್ಯದಲ್ಲೂ ಸಮಸ್ಯೆ ಆಗಿದೆ ಎಂದು ಹೇಳಿದರು.
ಪ್ರಸ್ತುತ ಕೇಂದ್ರ ಸರ್ಕಾರದ ಅಂಗಳದಲ್ಲಿ ಚೆಂಡಿದೆ. ತಾಂತ್ರಿಕ ಮಾಹಿತಿ ಆಧಾರದಲ್ಲಿ ಬರ ಘೋಷಣೆ ಆಗುತ್ತದೆ. ಯಾರೂ ಶಿಫಾರಸು ಮಾಡಿ ಬರ ಘೋಷಿಸಲು ಸಾಧ್ಯವಿಲ್ಲ ಎಂದರು. ಹಿಂದೆ 2023-24ರಲ್ಲಿ ಮಾನದಂಡಗಳ ಆಧಾರದಲ್ಲೇ ಬರ ಘೋಷಣೆ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ 3400 ಕೋಟಿ ರೂ. ಬಿಡುಗಡೆ ಮಾಡಲಿಲ್ಲ. ಆಗ ಸರ್ವೋನ್ನತ ನ್ಯಾಯಾಲಯಕ್ಕೆ ಹೋಗಬೇಕಾಯಿತು. ನ್ಯಾಯಾಲಯದ ಸೂಚನೆಯಂತೆ ಹಣವನ್ನು ಕೇಂದ್ರ ಬಿಡುಗಡೆ ಮಾಡಿತು.
ಬರ ತಾಲೂಕು ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಇದು ಅಪಪ್ರಚಾರ. ಇದನ್ನು ಅರ್ಥ ಮಾಡಿಕೊಂಡು ಪ್ರತಿಪಕ್ಷಗಳು ಇಂತಹ ಪ್ರಯತ್ನ ಕೈಬಿಡಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದು, ಕೈಪಿಡಿಯಲ್ಲಿನ ಷರತ್ತುಗಳನ್ನು ಬದಲಾವಣೆ ಮಾಡಿಸಲು ಪ್ರಯತ್ನ ಮಾಡಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.
