ಸಮಗ್ರ ಸುದ್ದಿ

ರಾಜ್ಯದಲ್ಲಿ ಭೀಕರ ಬರ: ತುರ್ತು ಪರಿಹಾರ ಕೋರಿ ಕೇಂದ್ರ ಗೃಹ ಮತ್ತು ಕೃಷಿ ಸಚಿವರಿಗೆ ಡಾ. ಜಿ. ಪರಮೇಶ್ವರ ಪತ್ರ! 177 ತಾಲ್ಲೂಕುಗಳು ಬರಪೀಡಿತ; ಸುಮಾರು ₹46,324.5 ಕೋಟಿ ಬೆಳೆ ನಷ್ಟ

Share

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು, ಕರ್ನಾಟಕಕ್ಕೆ ತುರ್ತು ನೆರವು ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

ಎರಡೂ ಪತ್ರಗಳಲ್ಲಿ ಬರದಿಂದ ರೈತರು ಹಾಗೂ ಗ್ರಾಮೀಣ ಜನರ ಜೀವನೋಪಾಯದ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ವಿವರಿಸಿರುವ ಡಾ. ಜಿ. ಪರಮೇಶ್ವರ ಅವರು, ರೈತರಿಗೆ ಸಮಯೋಚಿತ ಹಾಗೂ ಸಮರ್ಪಕ ಪರಿಹಾರ ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ 101 ಬರಪೀಡಿತ ತಾಲ್ಲೂಕುಗಳಿಗೆ ₹3,705.30 ಕೋಟಿ ಹಣಕಾಸು ನೆರವು ಕೋರಿ ಖಾರಿಫ್–2026 ಬರ ಪರಿಹಾರ ಮೆಮೊರಾಂಡಮ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಮುಂದಿನ ವೈಜ್ಞಾನಿಕ ಮೌಲ್ಯಮಾಪನದ ಬಳಿಕ ಹೆಚ್ಚುವರಿಯಾಗಿ 76 ತಾಲ್ಲೂಕುಗಳನ್ನು ಎರಡನೇ ಹಂತದಲ್ಲಿ ಬರಪೀಡಿತವೆಂದು ಘೋಷಿಸಲಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಇನ್ನೂ 40 ತಾಲ್ಲೂಕುಗಳಲ್ಲಿ ಗ್ರೌಂಡ್‌ ಟ್ರೂಥಿಂಗ್‌ ನಡೆಯುತ್ತಿದೆ. ನಿರಂತರ ಮೌಲ್ಯಮಾಪನದ ಆಧಾರದ ಮೇಲೆ ಮುಂಗಾರು ಅಂತ್ಯದ ವೇಳೆಗೆ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 220 ದಾಟುವ ಸಾಧ್ಯತೆ ಇದೆ.

ಹೊಸದಾಗಿ ಘೋಷಿಸಲಾದ 76 ಬರಪೀಡಿತ ತಾಲ್ಲೂಕುಗಳಲ್ಲಿ ನಡೆಸಿದ ಬೆಳೆಹಾನಿ ಮೌಲ್ಯಮಾಪನದಲ್ಲಿ 26.08 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 1.49 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ಹಾನಿಯ ಪ್ರಮಾಣ ಶೇ.33ರಿಂದ ಶೇ.100ರವರೆಗೆ ಇದ್ದು, ಈ ಬರಪೀಡಿತ ಪ್ರದೇಶಗಳಲ್ಲಿ ಬಹುಪಾಲು ಶೇ.50ಕ್ಕಿಂತ ಹೆಚ್ಚು ಬೆಳೆಹಾನಿ ದಾಖಲಾಗಿದೆ.

ತೊಗರಿ, ಮೆಕ್ಕೆಜೋಳ, ಹತ್ತಿ, ಕಬ್ಬು, ಸೋಯಾಬೀನ್ ಮತ್ತು ಹೆಸರು ಕಾಳು ಪ್ರಮುಖವಾಗಿ ಹಾನಿಗೊಳಗಾದ ಕೃಷಿ ಬೆಳೆಗಳಾಗಿವೆ. ಈರುಳ್ಳಿ, ಅಡಿಕೆ ಮತ್ತು ಕೆಂಪು ಮೆಣಸಿನಕಾಯಿ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೂ ಹಾನಿಯಾಗಿದೆ.

ಒಟ್ಟಾರೆ 27.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ದಾಖಲಾಗಿದ್ದು, ಬೆಳೆ ಬೆಳೆಯುವ ವೆಚ್ಚದ ಆಧಾರದ ಮೇಲೆ ₹27,576.2 ಕೋಟಿ ನಷ್ಟ ಅಂದಾಜಿಸಲಾಗಿದೆ. ಪ್ರಸ್ತುತ SDRF ಮಾನದಂಡಗಳ ಪ್ರಕಾರ ಇನ್‌ಪುಟ್ ಸಬ್ಸಿಡಿಗೆ ₹2,981.34 ಕೋಟಿ ಅಗತ್ಯವಿದೆ ಎಂದು
ಅಂದಾಜಿಸಲಾಗಿದೆ.

ಒಟ್ಟಾರೆ 177 ಬರಪೀಡಿತ ತಾಲ್ಲೂಕುಗಳಲ್ಲಿ ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಆರ್ಥಿಕ ನಷ್ಟ ₹46,324.5 ಕೋಟಿಗೆ ತಲುಪಿದೆ. ನಿರಂತರ ಮೌಲ್ಯಮಾಪನದ ಪ್ರಕಾರ 2026ರ ಖಾರಿಫ್ ಅವಧಿಯಲ್ಲಿ ಒಟ್ಟಾರೆ ಬೆಳೆಹಾನಿ 55 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಾಗುವ ಸಾಧ್ಯತೆ ಇದೆ.

ಈ ಎರಡು ಹಂತಗಳ ಬರ ಘೋಷಣೆಯ ಮೂಲಕ, ಎನ್‌ಡಿ‌ಆರ್‌ಎಫ್ ನಿಯಮಗಳಡಿ ₹7142.64 ಕೋಟಿಗಳನ್ನು ಕೊಡಬೇಕೆಂದು ಮನವಿ ಸಲ್ಲಿಸಲಾಗಿದೆ‌. ಇದರಲ್ಲಿ 4998.6ಕೋಟಿ ರೂಗಳು ಇನ್ ಪುಟ್ ಸಬ್ಸಿಡಿಗಾಗಿ ಮತ್ತು 2144.04 ಕೋಟಿ ರೂ ಗಳನ್ನು ಮೇವು ಮತ್ತು ಕುಡಿಯುವ ನೀರು ಮುಂತಾದವುಗಳಿಗಾಗಿ ಕೇಳಲಾಗಿದೆ.

ಪರಿಹಾರ ಮಾನದಂಡ ಪರಿಷ್ಕರಣೆಯಾಗಬೇಕು

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ SDRF ಮತ್ತು NDRF ಅಡಿಯಲ್ಲಿ ನೀಡಲಾಗುವ ನೆರವಿನ ಅಂಶಗಳು ಹಾಗೂ ಮಾನದಂಡಗಳನ್ನು, ವಿಶೇಷವಾಗಿ ರೈತರಿಗೆ ನೀಡುವ ಇನ್‌ಪುಟ್ ಸಬ್ಸಿಡಿಗೆ ಸಂಬಂಧಿಸಿದ ಮಾನದಂಡಗಳನ್ನು ಶೀಘ್ರ ಪರಿಷ್ಕರಿಸುವಂತೆ ಡಾ. ಜಿ. ಪರಮೇಶ್ವರ ಅವರು ಮನವಿ ಮಾಡಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ಇನ್‌ಪುಟ್ ಸಬ್ಸಿಡಿ ಮೊತ್ತವು ಇಂದಿನ ಕೃಷಿ ವೆಚ್ಚಕ್ಕೆ ಹೋಲಿಸಿದರೆ ಸಮರ್ಪಕವಾಗಿಲ್ಲ. ರೈತರು ಅನುಭವಿಸುವ ನೈಜ ನಷ್ಟದ ಅಲ್ಪಭಾಗವನ್ನಷ್ಟೇ ಇದು ಭರಿಸುತ್ತದೆ ಎಂಬುದನ್ನು ಅವರು ಕೇಂದ್ರದ ಗಮನಕ್ಕೆ ತಂದಿದ್ದಾರೆ. 16ನೇ ಹಣಕಾಸು ಆಯೋಗದ ಅವಧಿ ಆರಂಭವಾಗಿರುವ ಹಿನ್ನೆಲೆಯಲ್ಲಿ, ಬಹುಕಾಲದಿಂದ ಬಾಕಿ ಇರುವ ಪರಿಹಾರ ಮಾನದಂಡಗಳ ಪರಿಷ್ಕರಣೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.

ರೈತರಿಗೆ ನೀಡಲಾಗುವ ಪರಿಹಾರವು ಪ್ರಸ್ತುತ ಕೃಷಿ ವೆಚ್ಚ ಹಾಗೂ ಬೆಳೆಹಾನಿಯಿಂದ ಉಂಟಾಗುವ ನೈಜ ಆರ್ಥಿಕ ಪರಿಣಾಮವನ್ನು ಹೆಚ್ಚು ವಾಸ್ತವಿಕವಾಗಿ ಪ್ರತಿಬಿಂಬಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. ಈ ಮಾನದಂಡಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತನ್ನ ವಿವರವಾದ ಅಭಿಪ್ರಾಯ ಮತ್ತು ಸಮರ್ಥನೆಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಈಗಾಗಲೇ ಸಲ್ಲಿಸಿದೆ.

ಕೇಂದ್ರದ ಬರ ಮೌಲ್ಯಮಾಪನ ಪ್ರಕ್ರಿಯೆ ತ್ವರಿತಗೊಳಿಸಿ, ಶೀಘ್ರ ಪರಿಹಾರ ನೀಡಿ

ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿ, ಕರ್ನಾಟಕದ ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ತಂಡ ಆಗಮಿಸಿರುವುದನ್ನು ಡಾ. ಜಿ. ಪರಮೇಶ್ವರ ಸ್ವಾಗತಿಸಿದ್ದಾರೆ.

ಬರದ ತೀವ್ರತೆ ಮತ್ತು ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರದ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ರಾಜ್ಯಕ್ಕೆ ಅಗತ್ಯ ನೆರವನ್ನು ನೀಡುವ ನಮ್ಮ ಮನವಿಯನ್ನು ಪರಿಗಣಿಸಿ ಶೀಘ್ರವೇ ಪರಿಹಾರ ಬಿಡುಗಡೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಕೋರಿದ್ದಾರೆ.

ವ್ಯಾಪಕ ಬೆಳೆಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ತ್ವರಿತ ಮೌಲ್ಯಮಾಪನ ಮತ್ತು ಸಮಯೋಚಿತ ಪರಿಹಾರ ಅತ್ಯಂತ ಅಗತ್ಯವಾಗಿದೆ ಎಂದು ಪತ್ರದಲ್ಲಿ ಒತ್ತಿ ಹೇಳಿದ್ದಾರೆ. ಬರದ ಪರಿಣಾಮವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ನೆರವು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

“ಪ್ರಸ್ತುತ ಬರದ ಪ್ರಮಾಣ ಮತ್ತು ತೀವ್ರತೆಯನ್ನು ಗಮನಿಸಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡುವುದು ಅಗತ್ಯ. ನಮ್ಮ ರೈತರಿಗೆ ಸಮಯೋಚಿತ ಮತ್ತು ಸಮರ್ಪಕ ನೆರವು ದೊರೆಯಬೇಕು. ನೀಡಲಾಗುವ ಪರಿಹಾರವು ಅವರು ಅನುಭವಿಸಿರುವ ನೈಜ ನಷ್ಟವನ್ನು ಪ್ರತಿಬಿಂಬಿಸುವಂತಿರಬೇಕು” ಎಂದು ಡಾ. ಜಿ. ಪರಮೇಶ್ವರ ಅವರು ಹೇಳಿದ್ದಾರೆ.

ಕರ್ನಾಟಕದ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಹಾರ ಮಾನದಂಡಗಳನ್ನು ಬಲಪಡಿಸುವುದರ ಜೊತೆಗೆ ಬರ ಪರಿಹಾರ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಶೀಘ್ರ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ಡಾ. ಜಿ. ಪರಮೇಶ್ವರ ವ್ಯಕ್ತಪಡಿಸಿದ್ದಾರೆ.


Share

You cannot copy content of this page