ಬೆಳಗಾವಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸವಾಗಿರುವ 1,382 ಕುಟುಂಬಗಳ ಸ್ಥಳಾಂತರಕ್ಕೆ 2005ರಲ್ಲಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೊಷಣೆ ಮಾಡಿತ್ತು. ವಾಸವಿದ್ದ ಕುಟುಂಬಗಳ ಪೈಕಿ 670 ಕುಟುಂಬಗಳು ಸ್ಥಳಾಂತರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆಯೇ 356 ಕುಟುಂಬಗಳಿಗೆ ರೂ.142 ಕೋಟಿ ಪರಿಹಾರ ನೀಡಿ ಸ್ಥಳಾಂತರ ಮಾಡಲಾಗಿದೆ. ಪ್ರಸ್ತುತ ಬಾಕಿ ಉಳಿದ 314 ಕುಟುಂಬಗಳಿಗೆ ರೂ.300 ಕೋಟಿ ವೆಚ್ಚದಲ್ಲಿ ಪುರ್ನವಸತಿ ಕಲ್ಪಿಸಲು ಸರ್ಕಾರ ಸಿದ್ಧವಿದೆ ಎಂದು ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಬುಧವಾರ ಶಾಸಕರಾದ ಅರಗ ಜ್ಞಾನೇಂದ್ರ ಮತ್ತು ಟಿ.ಡಿ.ರಾಜೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಸಚಿವ ಈಶ್ವರ ಖಂಡ್ರೆ ಉತ್ತರಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಬರಲು ಇಚ್ಛಿಸಿದ ಕುಟುಂಬಗಳು ಮೊದಲು ತಹಶೀಲ್ದಾರ್ ಅಧ್ಯಕ್ಷತೆಯ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಸಮಿತಿಯಲ್ಲಿ ಕಂದಾಯ, ಭೂದಾಖಲೆ, ತೋಟಗಾರಿಕೆ, ಅರಣ್ಯ, ಕೃಷಿ, ಲೋಕೋಪಯೋಗಿ ಸೇರಿದ ಅಧಿಕಾರಿಗಳು ಇದ್ದು, ಪುನರ್ವಸತಿಗೆ ಅರ್ಜಿ ಸಲ್ಲಿಸಿದ ಕುಟುಂಬ ವಾಸವಿದ್ದ ಮನೆ ಹಾಗೂ ಜಮೀನುಗಳ ಮೌಲ್ಯವನ್ನು ನಿರ್ಣಯಿಸಿ, ಜಿಲ್ಲಾಧಿಕಾರಿಗಳ ಸಮಿತಿಗೆ ಸಲ್ಲಿಸುತ್ತಾರೆ.
ನಂತರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಸಮಿತಿಯು ಪರಿಹಾರವನ್ನು ನಿಗದಿಪಡಿಸಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಇದನ್ನು ಆಧರಿಸಿ ಸರ್ಕಾರ 2025ರ ಪ್ರಸ್ತುತ ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆ ಪ್ರಮಾಣಿತ ದರದಲ್ಲಿ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಿದೆ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಕುದುರೆಮುಖದಲ್ಲಿ ವಾಸವಿರುವ ಉಳಿದ ಕುಟುಂಬಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲು ಅಂದಾಜು ರೂ.600 ಕೋಟಿ ಅವಶ್ಯಕತೆಯಿದೆ. ಕೇಂದ್ರ ಸರ್ಕಾರದ ಕ್ಯಾಂಪಾ (CAMPA-Compensatory Afforestation Fund Management and Planning Authority) ನಿಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ರೂ.1,400 ಕೋಟಿ ಹಣವಿದೆ. ಇದರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಪುನರ್ವಸತಿಗೆ ಅನುದಾನ ಒದಗಿಸುವಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರಲ್ಲಿ ಕೋರಲಾಗಿದೆ. ಅನುಮೋದನೆ ದೊರೆತರೆ ಎಲ್ಲಾ ಕುಟುಂಬಗಳನ್ನು ಸ್ಥಳಾಂತರಿಸಿ ಪುರ್ನವಸತಿ ಕಲ್ಪಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ ಕುದುರೆಮುಖ ಅರಣ್ಯದಲ್ಲಿ ವಾಸಿಸುವ ಕುಟುಂಬಗಳ ಸಮಸ್ಯೆ ಅರಣ್ಯರೋಧನವಾಗಿದೆ. ಸರ್ಕಾರ ಕೂಡಲೇ ಪರಿಹಾರ ದೊರಕಿಸಿಕೊಡಬೇಕು. ಇತರೆ ಯೋಜನೆಗಳಲ್ಲಿ ಭೂಮಿ ಕಳೆದುಕೊಂಡವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ನೀಡುವ ಮೀಸಲಾತಿ ಸೌಲಭ್ಯವನ್ನು ಇವರಿಗೂ ನೀಡಬೇಕು. 2025ರ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಿದರೆ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.
ಶೃಂಗೇರಿ ತಾಲ್ಲೂಕಿನ 76 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ರೂ.22.32 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಪ್ರಾಮಾಣಿತ ದರಕ್ಕೆ 1:4 ಅನುಪಾತದಲ್ಲಿ ನಿರಾಶ್ರಿತರಿಗೆ ಪರಿಹಾರ ನೀಡಬೇಕು ಎಂದು ಸಚಿವರಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜುಗೌಡ ಕೋರಿದರು. ಇದನ್ನು ಬೆಂಬಲಿಸಿ ಮೂಡಿಗೆರೆ ಶಾಸಕಿ ನಯನ ಮೊಟಮ್ಮ ಸೂಕ್ತ ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು
