ಸಮಗ್ರ ಸುದ್ದಿ

2025ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಪರ್ಯಾಲೋಚನೆ ನಂತರ ಅಂಗೀಕಾರ

Share

ಬೆಳಗಾವಿ: ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯದ ಅನುಸೂಚಿತ ಜಾತಿಗಳ ವಿವಿಧ ಉಪಗುಂಪುಗಳಲ್ಲಿ ಅನುಸೂಚಿತ ಜಾತಿಗಳ ಉಪ ವರ್ಗೀಕರಣದ ಕುರಿತು ನಿರ್ದಿಷ್ಟ ಶಿಫಾರಸ್ಸುಗಳನ್ನು ಸೂಚಿಸಲು ನಿವೃತ್ತ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಅವರನ್ನೊಳಗೊಂಡ ಏಕವ್ಯಕ್ತಿ ಆಯೋಗದ ವರದಿಯನುಸಾರ ಮೀಸಲಾತಿ ಪ್ರಯೋಜನಗಳ ನ್ಯಾಯಯುತ ಮತ್ತು ಸಮಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು, ಅನುಸೂಚಿತ ಜಾತಿಗಳ ನಡುವಣ ಉಪ-ವರ್ಗೀಕರಣವನ್ನು ಅನುಷ್ಠಾನಗೊಳಿಸುವುದಕ್ಕಾಗಿ ಆಯೋಗವು ಮಾಡಿರುವ ಶಿಫಾರಸ್ಸುಗಳನ್ನು ಮಾರ್ಪಾಡಿನೊಂದಿಗೆ ಸರ್ಕಾರವು ಅನುಮೋದಿಸಿದೆ.

ಶೇ.17 ಮೀಸಲಾತಿಯ ಪಾಲಿನೊಂದಿಗೆ ಉಪ -ಪ್ರವರ್ಗೀಕರಣಗೊಳಿಸಲಾದ 101 ಅನುಸೂಚಿತ ಜಾತಿಗಳನ್ನು ಪ್ರವರ್ಗ-ಎ (16 ಜಾತಿಗಳು) ಶೇ.6, ಪ್ರವರ್ಗ-ಬಿ (19 ಜಾತಿಗಳು) ಶೇ.6 ಹಾಗೂ ಪ್ರವರ್ಗ-ಸಿ (63 ಜಾತಿಗಳು) ಶೇ.5 ರಂತೆ ಒಟ್ಟು 98 ಜಾತಿಗಳಿಗೆ ಶೇ.17 ರಂತೆ ಮೀಸಲಾತಿ ನಿಗದಿಪಡಿಸಿದೆ.

ರಾಜ್ಯಸರ್ಕಾರವು ಅನುಸೂಚಿತ ಜಾತಿಗಳ ಉಪವರ್ಗೀಕರಣದ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನು ಬದ್ಧತೆಯನ್ನು ನೀಡಲು ಈ ವಿಧೇಯಕದ ಮಹತ್ವವನ್ನು ಸದನದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ವಿವರಿಸಿ, ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕು ಎಂದು ಕೋರಿದರು.

ವಿಧೇಯಕದ ಕುರಿತು ಸದನದ ಸದಸ್ಯರುಗಳ ಚರ್ಚೆಯ ಬಳಿಕ 2025ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಲಾಯಿತು.

ಇದೇ ವೇಳೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧಿನಿಯಮ, (ತಿದ್ದುಪಡಿ) ಅಧಿನಿಯಮ 2025 ವಿಧೇಯಕವು ಪರ್ಯಾಲೋಚನೆ ನಂತರ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.


Share

You cannot copy content of this page