ಬೆಂಗಳೂರು: ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ “ಟಿಸಿಎಸ್ ವರ್ಲ್ಡ್ 10 ಕೆ” ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯಪಾಲರಾದ ಥಾವರ್ ಚಂದ್ ಗೆಹಲೊಟ್ ಅವರ ಜತೆ ಚಾಲನೆ ನೀಡಿದರು. ನಂತರ ಮ್ಯಾರಥಾನ್ ಓಟಗಾರರಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ನಂತರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಇಂದು ಬೆಳಗಿನ ಜಾವ 3.00 ಗಂಟೆಗೆ ದೆಹಲಿಯಿಂದ ವಾಪಸ್ ಬಂದು, ಟಿಸಿಎಸ್ ನ 10ಕೆ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದೆ. ಮೊದಲೇ ಒಪ್ಪಿಕೊಂಡಿದ್ದರಿಂದ ನಾನು ಹಾಗೂ ರಾಜ್ಯಪಾಲರು ಭಾಗಿಯಾಗಿದ್ದೇವೆ” ಎಂದು ತಿಳಿಸಿದರು.
ಸುಮಾರು 32 ಸಾವಿರ ಜನ ಭಾಗಿಯಾಗಿದ್ದರು. ಅದರಲ್ಲಿ 26% ಮಹಿಳೆಯರು ಭಾಗವಹಿಸಿದ್ದರು. ಬೆಂಗಳೂರಿಗರು ಮಾತ್ರವಲ್ಲದೆ ವಿದೇಶದಿಂದಲೂ ಜನರು ಬಂದಿದ್ದರು. ಸುಮಾರು ಐದರಿಂದ ಆರು ದಿನಗಳ ಕಾಲ ಪರಿಶೀಲನೆ ಕೂಡ ನಡೆದಿತ್ತು. ಟ್ಯ್ರಾಕ್ ಈ ಬಾರಿ ತುಂಬಾ ಚೆನ್ನಾಗಿತ್ತು ಅನ್ನೋ ಅಭಿಪ್ರಾಯ ಓಟಗಾರರಿಂದ ಕೇಳಿಬಂದಿದೆ. ಈ ಬಾರಿ ತುಂಬಾ ಚೆನ್ನಾಗಿ ಆಯೋಜಿಸಲಾಗಿದೆ ಅಂತ ತೇಜಸ್ವಿ ಸೂರ್ಯ ಕೂಡ ಅಭಿನಂದಿಸಿದರು. ಓಮರ್ ಅಬ್ದುಲ್ಲಾ ಕೂಡ ಈ ಮ್ಯಾರಥಾನ್ ನಲ್ಲಿ ಭಾಗಿಯಾಗಿದ್ದರು. ಈ ರೀತಿ ಕ್ರೀಡಾ ಹಾಗೂ ಪ್ರವಾಸೋದ್ಯಮ ಕಾರ್ಯಕ್ರಮಗಳನ್ನು ಮಾಡುವುದರಿಂದ ಬೆಂಗಳೂರಿಗೆ ತುಂಬಾ ಅನುಕೂಲ ಆಗಲಿದೆ. ಟಿಸಿಎಸ್ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ತೇಜಸ್ವಿ ಸೂರ್ಯ ಅವರಿಂದ ಹೊಗಳಿಕೆ ನಿರೀಕ್ಷಿಸುವವರು ಮೂರ್ಖರು
2 ವಾರಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಸೂರ್ಯ ಅವರು ಬೆಂಗಳೂರು ಮೂಲಸೌಕರ್ಯ ಬಗ್ಗೆ ಟೀಕೆ ಮಾಡಿದ ವಿಚಾರವಾಗಿ ಕೇಳಿದಾಗ, ಅವರು ಇರುವುದೇ ಟೀಕೆ ಮಾಡುವುದಕ್ಕೆ. ಅವರ ಕೈಯಿಂದ ಇನ್ನೇನು ಮಾಡಲು ಆಗುವುದಿಲ್ಲ. ಟೀಕೆ ಮಾಡದೇ ಅವರೇನು ಹೊಗಳುತ್ತಾರಾ? ಅವರು ಹೊಗಳುತ್ತಾರೆ ಅಂತ ನಾವು ಭಾವಿಸಿದರೆ ನಾವು ಮೂರ್ಖರು ಎಂದು ತಿರುಗೇಟು ನೀಡಿದರು.
