ಬೆಂಗಳೂರು: ಮುಂಬರುವ ಮುಂಗಾರು ಮಳೆ ಕಡಿಮೆಯಾಗುವ ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಮೇಲ್ಮೈ ನೀರಿನ ಮೇಲಿನ ಅವಲಂಬನೆ ತಗ್ಗಿಸಲು ಬೆಂಗಳೂರು ಜಲಮಂಡಳಿಯು ಮಹತ್ವದ ಹೆಜ್ಜೆಯಿಟ್ಟಿದೆ.
ನಗರದಲ್ಲಿ ಮಳೆನೀರು ಕೊಯ್ಲು ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ, ಇಚ್ಚಿಸುವ ಗ್ರಾಹಕರ ಕಟ್ಟಡಗಳಲ್ಲಿ ಜಲಮಂಡಳಿಯೇ ಖುದ್ದಾಗಿ ಅತ್ಯಾಧುನಿಕ ಹಾಗೂ ವಿನೂತನ ತಂತ್ರಜ್ಞಾನದ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕಡಿಮೆ ಜಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅದರ ವೈಶಿಷ್ಟ್ಯಗಳು:
ಜಾಗದ ಕೊರತೆಯಿಂದಾಗಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲು ಹಿಂದೇಟು ಹಾಕುವ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಜಾಗದಲ್ಲಿ ಅಳವಡಿಸಬಹುದಾದ ಹೊಸ ‘3rd Generation’ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ. ಇದು ಕಾವೇರಿ ನೀರು ಹಾಗೂ ಅಂತರ್ಜಲದ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆಗೊಳಿಸಲಿದೆ.
ಈ ನೂತನ ಫಿಲ್ಟರ್ ನ ಪ್ರಮುಖ ತಾಂತ್ರಿಕ ಅಂಶಗಳು:
ಇದರಲ್ಲಿ ಆಂಟಿ-ಚೋಕ್ (anti-choke) ನೇಯ್ಗೆಯನ್ನು ಹೊಂದಿರುವ SS316 ಮೆಶ್ ಅನ್ನು ಅಳವಡಿಸಲಾಗಿದೆ.
ಫಿಲ್ಟರ್ ನ ಒಳಗಿರುವ ಸ್ಟ್ರೀಮ್ ಲೈನರ್ (Streamliner) ವಿನ್ಯಾಸವು ಒಳಬರುವ ನೀರಿನ ವೇಗವನ್ನು ಗರಿಷ್ಠಗೊಳಿಸುತ್ತದೆ.
ಕೇವಲ ಗುರುತ್ವಾಕರ್ಷಣೆಯ (gravity) ಶಕ್ತಿಯನ್ನು ಬಳಸಿಕೊಂಡು 60 ಮೈಕ್ರಾನ್ ಮೆಶ್ ನಲ್ಲಿ 90% ಕ್ಕಿಂತ ಹೆಚ್ಚು ನೀರನ್ನು ಮರುಪಡೆಯುವ (recovery rate) ಅದ್ಭುತ ಸಾಮರ್ಥ್ಯವನ್ನು ಇದು ಹೊಂದಿದೆ.
ಇದರಲ್ಲಿರುವ ರೆಗ್ಯುಲೇಟರಿ ಸಿಸ್ಟಮ್ (Regulatory system) ಮತ್ತು ಆಟೋಮ್ಯಾಟಿಕ್ ವಿಂಡೋ (automatic window) ಒಟ್ಟಾಗಿ ಕೆಲಸ ಮಾಡಲಿದ್ದು, ನೀರಿನಲ್ಲಿರುವ ಎಷ್ಟೇ ದೊಡ್ಡ ಗಾತ್ರದ ತ್ಯಾಜ್ಯವಿದ್ದರೂ ಅದನ್ನು ತಕ್ಷಣವೇ ಹೊರಹಾಕಿ ಅತ್ಯಂತ ಶುದ್ಧ ನೀರನ್ನು ಒದಗಿಸುತ್ತದೆ.
ಗ್ರಾಹಕರಿಗೆ ಇಮ್ಮಡಿ ಲಾಭ:
ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಕಾರಣಕ್ಕಾಗಿ ನಗರದ ಅನೇಕ ಗ್ರಾಹಕರು ಜಲಮಂಡಳಿಗೆ ಪ್ರತಿ ತಿಂಗಳು ದಂಡ (ಪೆನಾಲ್ಟಿ) ಪಾವತಿಸುತ್ತಿದ್ದಾರೆ. ಜಲಮಂಡಳಿಯು ಈ ದಂಡದ ರೂಪದಲ್ಲಿಯೇ ಪ್ರತಿ ತಿಂಗಳು ಸುಮಾರು 3 ಕೋಟಿ ರೂಪಾಯಿಗಳಷ್ಟು ಆದಾಯ ಸಂಗ್ರಹಿಸುತ್ತಿದೆ. ಗ್ರಾಹಕರಿಗೆ ಅನುಕೂಲವಾಗಬೇಕು ಹಾಗೂ ಮಳೆ ನೀರಿನ ಸದ್ಬಳಕೆಯಾಗಬೇಕು ಎಂಬ ಸದುದ್ದೇಶದಿಂದ ಈ ಹೊಸ ಯೋಜನೆಯನ್ನು ರೂಪಿಸಲಾಗಿದೆ *ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಯೋಜನೆಯಡಿ ಇಚ್ಚಿಸುವ ಗ್ರಾಹಕರ ಕಟ್ಟಡಗಳಿಗೆ ಜಲಮಂಡಳಿಯೇ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲಿದೆ. ಇದಕ್ಕಾಗಿ ತಗಲುವ ವೆಚ್ಚವನ್ನು, ಗ್ರಾಹಕರು ಪ್ರತಿ ತಿಂಗಳು ಪಾವತಿಸುವ ಪೆನಾಲ್ಟಿ ಮೊತ್ತದ ರೂಪದಲ್ಲೇ ಹಂತ ಹಂತವಾಗಿ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಕಾಲಕ್ರಮೇಣ ಗ್ರಾಹಕರಿಗೆ ದಂಡ ಕಟ್ಟುವ ಕಿರಿಕಿರಿ ತಪ್ಪುವುದರ ಜೊತೆಗೆ, ಮಾಸಿಕ ನೀರಿನ ಬಿಲ್ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಲಿದೆ.
ಈಗಾಗಲೇ ಪ್ರಾಯೋಗಿಕ ಯೋಜನೆ ಯಶಸ್ವಿ:
ಈ ವಿನೂತನ ಮಳೆನೀರು ಕೊಯ್ಲು ಪದ್ಧತಿಯನ್ನು ಈಗಾಗಲೇ ಪ್ರಾಯೋಗಿಕವಾಗಿ (ಪೈಲಟ್ ಪ್ರಾಜೆಕ್ಟ್) 75 ಕಡೆಗಳಲ್ಲಿ ಅಳವಡಿಸಲಾಗಿದ್ದು, ಅತ್ಯುತ್ತಮ ಗುಣಮಟ್ಟದ ನೀರು ಲಭ್ಯವಾಗುತ್ತಿರುವುದು ದೃಢಪಟ್ಟಿದೆ. ಇಂದು ಭುವನೇಶ್ವರಿ ನಗರದ ಕಟ್ಟಡವೊಂದರಲ್ಲಿ ಅಳವಡಿಸಿರುವ ಮಳೆನೀರು ಕೊಯ್ಲು ಪದ್ಧತಿಯನ್ನು ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಖುದ್ದು ಪರೀಕ್ಷಿಸಿದರು. ಇದರ ಯಶಸ್ಸಿನ ಆಧಾರದ ಮೇಲೆ, ಈವರೆಗೂ ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಇದನ್ನು ವಿಸ್ತರಿಸುವ ಬೃಹತ್ ಅಭಿಯಾನಕ್ಕೆ ಜಲಮಂಡಳಿ ಸಿದ್ಧತೆ ನಡೆಸಿದೆ.
ಗ್ರಾಹಕರ ಮೆಚ್ಚುಗೆ:
ಹೊಸ ಪದ್ಧತಿಯ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನಿವಾಸಿ ಅಶ್ವಥ್ ಅವರು ತಮ್ಮ ಅನುಭವ ಹಂಚಿಕೊಂಡು, “ಜಲಮಂಡಳಿಯ ಈ ಕಾರ್ಯತತ್ಪರತೆ ತುಂಬಾ ಸ್ವಾಗತಾರ್ಹ. ತಾಂತ್ರಿಕವಾಗಿ ಹಾಗೂ ವಿಜ್ಞಾನದ ಸಹಾಯದಿಂದ ಮಳೆನೀರನ್ನು ನೇರವಾಗಿ ಉಪಯೋಗಿಸಲು 3rd generation Rainwater filters ಬಂದಿದೆ. ನಾನು ಖುದ್ದು ಲ್ಯಾಬ್ ಟೆಸ್ಟ್ (lab test) ಮಾಡಿಸಿದ್ದೇನೆ, ಫಿಲ್ಟರ್ ಆದ ಮಳೆನೀರು ನಲ್ಲಿ ಹಾಗೂ ಕೊಳದ ನೀರಿಗಿಂತ ಪರಿಶುದ್ಧವಾಗಿದೆ. ಈ ನೀರನ್ನು ಹೆಚ್ಚಿಗೆ ಸಂಗ್ರಹಿಸಲು ಹೊಸ ಸಂಪ್ (Sump) ಮಾಡಲಿದ್ದೇನೆ. ಮಳೆನೀರನ್ನು ಮರುಬಳಕೆ ಮಾಡುವುದರಿಂದ ನಮ್ಮ ಕಾವೇರಿ ನೀರಿನ ಬಿಲ್ ಕೂಡ ಕಡಿಮೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನದ ಕುರಿತು ಮುಂಬರುವ ಜಲಮಂಡಳಿಯ ಆಡಳಿತ ಮಂಡಳಿ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಅವರು ಸ್ಪಷ್ಟಪಡಿಸಿದ್ದಾರೆ.
