ಸಮಗ್ರ ಸುದ್ದಿ

ಕುದುರೆಮುಖ ಪುನರ್ವಸತಿ ಯೋಜನೆ:2.38 ಕೋಟಿ ರೂ. ಚೆಕ್ ವಿತರಿಸಿದ ಈಶ್ವರ ಖಂಡ್ರೆ| ಕುದುರೆಮುಖ ಅರಣ್ಯದಿಂದ 5 ಕುಟುಂಬಗಳ ಸ್ಥಳಾಂತರ

Share

ಮಂಗಳೂರು: ಕುದುರೆಮುಖ ಸೇರಿದಂತೆ ರಾಜ್ಯದ ಅರಣ್ಯದೊಳಗಿರುವ ವಸತಿ ಪ್ರದೇಶಗಳ ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಮಂಗಳೂರಿನಲ್ಲಿಂದು ನಡೆದ ಗೇರುಮೇಳದಲ್ಲಿ, ಕೆಲವು ತಿಂಗಳ ಹಿಂದೆ ಆನೆ ದಾಳಿಗೆ ಇಬ್ಬರು ಮೃತಪಟ್ಟಿದ್ದ, ಕೆರೆಕಟ್ಟೆ ಪ್ರದೇಶ ಸೇರಿದಂತೆ ಕುದುರೆಮುಖ ಅರಣ್ಯದಿಂದ ಸ್ವಯಂ ಪ್ರೇರಿತರಾಗಿ ಹೊರಬರಲು ಅರ್ಜಿ ಸಲ್ಲಿಸಿದ್ದ 5 ಕುಟುಂಬಗಳಿಗೆ 2.38 ಕೋಟಿ ರೂ.ಚೆಕ್ ವಿತರಿಸಿ ಅವರು ಮಾತನಾಡಿದರು.

ಇಬ್ಬರ ಮೇಲೆ ಕಾಡಾನೆ ದಾಳಿ ಮಾಡಿದಾಗ, ಪುಂಡಾನೆಯನ್ನು ಸೆರೆ ಹಿಡಿಯಲು ಸೂಚನೆ ನೀಡಲಾಗಿತ್ತು. ಆನೆ ಸೆರೆ ಮಾತ್ರವೇ ಪರಿಹಾರ ಆಗುವುದಿಲ್ಲ. ಹೀಗಾಗಿ ಅರಣ್ಯದೊಳಗಿನ ಜನರ ಸ್ಥಳಾಂತರದ ಮೂಲಕ ಅರಣ್ಯ ಪ್ರದೇಶ ವಿಸ್ತರಣೆ, ಸಂರಕ್ಷಣೆ ಮಾಡಲು ಸರ್ಕಾರ ಕ್ರಮ ವಹಿಸಿದೆ ಎಂದರು.

ಕುದುರೆಮುಖ ಅರಣ್ಯದೊಳಗೆ 1300 ಪರಿವಾರಗಳಿದ್ದವು, 350 ಕುಟುಂಬಗಳಿಗೆ ಪರಿಹಾರ ನೀಡಿದೆ ಸ್ಥಳಾಂತರಿಸಲಾಗಿದೆ. ಇನ್ನೂ 300 ಕುಟುಂಬಗಳು ಸ್ವಯಂ ಇಚ್ಛೆಯಿಂದ ಸ್ಥಳಾಂತರಗೊಳ್ಳಲು ಅರ್ಜಿ ಸಲ್ಲಿಸಿದ್ದು, ಹಂತ ಹಂತವಾಗಿ ಪುನರ್ವಸತಿ ಯೋಜನೆ ಜಾರಿಗೆ ತರಲಾಗುವುದು ಎಂದರು.

ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಹೊರಗುತ್ತಿಗೆ ಕೆಲಸ:

ಪ್ರತಿಯೊಂದು ಜೀವವೂ ಅಮೂಲ್ಯ. ಹೋದ ಜೀವ ಮರಳಿ ತರಲು ಸಾಧ್ಯವಿಲ್ಲ. ಆದರೆ ಅವರನ್ನು ಆಶ್ರಯಿಸಿದ್ದ ಕುಟುಂಬಗಳಿಗೆ ಆಸರೆಯಾಗಲು ಸರ್ಕಾರ ವನ್ಯಜೀವಿ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಈ ಘಟನೆ ನಡೆದ ಬಳಿಕ ಬಹಳ ವರ್ಷದಿಂದ ಅರ್ಜಿ ಹಾಕಿ ಕಾಯುತ್ತಿದ್ದ ಅರಣ್ಯದೊಳಗಿನ ವಸತಿ ಪ್ರದೇಶಗಳ ಸ್ಥಳಾಂತರ ಯೋಜನೆಯನ್ನು ಆರ್ಥಿಕ ಲಭ್ಯತೆಯ ಇತಿಮಿತಿಯಲ್ಲಿ ಪುನಾರಂಭಿಸಲು ನಿರ್ಧರಿಸಲಾಗಿದ್ದು. ಈ ಬಗ್ಗೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿ ಕೂಡಲೇ ಸ್ವಯಂ ಇಚ್ಛೆಯಿಂದ ಕಾಡಿನಿಂದ ಹೊರಗೆ ಬರಲು ಅರ್ಜಿ ಸಲ್ಲಿಸಿರುವ ಕುಟುಂಬಗಳನ್ನು ಗುರುತಿಸಿ ಸ್ಥಳಾಂತರಿಸಲು ಸೂಚಿಸಿದ್ದೆ, ಇಂದು 5 ಕುಟುಂಬಕ್ಕೆ ಚೆಕ್ ನೀಡಲಾಗಿದೆ. ಜೊತೆಗೆ 20 ಕೋಟಿ ರೂಪಾಯಿಗಳನ್ನು ಪುನರ್ವಸತಿ ಯೋಜನೆಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಕೆರೆಕಟ್ಟೆಯ ಮುಡಬಿಯಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬದ ಸ್ಥಿತಿಯನ್ನು ಪರಿಗಣಿಸಿ. ಮಾನವೀಯ ನೆಲೆಗಟ್ಟಿನಲ್ಲಿ ಆ ಕುಟುಂಬದ ಇಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗವನ್ನೂ ನೀಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ವನ ಪ್ರದೇಶ ಇರುವ ಜಿಲ್ಲೆಗಳಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚಾಗಿದೆ. ಮಂಗಳೂರು ಭಾಗದಲ್ಲೂ ಈ ಸಮಸ್ಯೆ ಇದೆ. ತಾವು ಸಚಿವರಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಸಮರ್ಪಿತ ಆನೆ ಕಾರ್ಯಪಡೆ ಮಂಜೂರು ಮಾಡಲಾಗಿದ್ದು, 25 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಸುತ್ತಿದ್ದೇವೆ. ಕಾಡಿನಲ್ಲಿ ವನ್ಯಜೀವಿಗಳಿಗೆ ನೀರು, ಆಹಾರದ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಸಿಬ್ಬಂದಿ ನೇಮಕಾತಿ ಮಾಡುತ್ತಿದ್ದೇವೆ. ಕಮಾಂಡ್ ಸೆಂಟರ್ ಆರಂಭಿಸಿದ್ದೇವೆ ಎಂದರು.

ಚಾರಣ ಎಸ್.ಓ.ಪಿ. ಕಟ್ಟುನಿಟ್ಟಿನ ಜಾರಿಗೆ – ಈಶ್ವರ ಖಂಡ್ರೆ ಸೂಚನೆ:

ತಮ್ಮ ಸೂಚನೆಯಂತೆ ಇತ್ತೀಚೆಗೆ ಇಲಾಖೆ ಸಿದ್ಧಪಡಿಸಿರುವ ಚಾರಣಿಗರ ಸುರಕ್ಷತೆಯ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಓ.ಪಿ.)ಯ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಿದ ಸಚಿವರು, ಇದೇ ಸಂದರ್ಭದಲ್ಲಿ ಟ್ರೆಕ್ ಪಾಸ್ ಪೋರ್ಟ್ ಮತ್ತು ಟ್ರೆಕ್ ಗೈಡ್ ಕೈಪಿಡಿ ಹಾಗೂ ಚಾರಣದಲ್ಲಿ ಭಾಗಿಯಾಗುವ ಪ್ರಕೃತಿ ಮಾರ್ಗದರ್ಶಕರಿಗೆ ಪ್ರಥಮ ಚಿಕಿತ್ಸೆಯ ಕಿಟ್ ಅನ್ನು ವಿತರಿಸಿದರು.

ಕುದುರೆಮುಖ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿನ ಶೋಲಾ ಸಫಾರಿಗಾಗಿ ಕ್ಯಾಂಪರ್ ವಾಹನಕ್ಕೂ ಚಾಲನೆ ನೀಡಿದರು. ಚಾರಣಿಗರ ಅನುಕೂಲಕ್ಕಾಗಿ ಕೈಪಿಡಿಯನ್ನೂ ಬಿಡುಗಡೆ ಮಾಡಿದರು.

ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 11 ಕೋಟಿ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ಅರಣ್ಯ ಒತ್ತುವರಿಯನ್ನು ತೆರವು ಮಾಡಲು ಆದ್ಯತೆ ನೀಡಲಾಗಿದ್ದು ಸಾವಿರಾರು ಕೋಟಿ ರೂ. ಬೆಲೆ ಬಾಳುವ ಅರಣ್ಯ ಒತ್ತುವರಿಯನ್ನು ಹಂತ ಹಂತವಾಗಿ ತೆರವು ಮಾಡಿಸಲಾಗುತ್ತಿದೆ ಎಂದರು.

ಮಾಲಿನ್ಯ ತಡೆಗೆ ಕ್ರಮ

ಕುಡಿಯುವ ನೀರು ಪೂರೈಸುವ ಮೂಲಗಳಿಗೆ ತ್ಯಾಜ್ಯಜಲ ಸೇರದಂತೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ ಸಚಿವರು, ಜಲ ಕಾಯಿದೆಯ ನಿಯಮಗಳ ಅಡಿ ಸಂಸ್ಕರಿಸದೆ ತ್ಯಾಜ್ಯವನ್ನು ಜಲಮೂಲಗಳಿಗೆ ಹರಿಸುವವರಿಗೆ ನೋಟಿಸ್ ನೀಡಲು ಆದೇಶಿಸಲಾಗಿದೆ ಎಂದರು.
ಬಡ ರೈತರ ಶೋಷಣೆ ಆಗದ ರೀತಿಯಲ್ಲಿ ಸೆಕ್ಷನ್ 4 ಮತ್ತು ಡೀಮ್ಡ್ ಅರಣ್ಯದ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಗುಣಮಟ್ಟದ ಗೇರು ಕಸಿ ಸಸಿ ಬೆಳೆಯಲು 1 ಕೋಟಿ ರೂ ಅನುದಾನ: ಈಶ್ವರ ಖಂಡ್ರೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಗೇರು ಅಥವಾ ಗೋಡಂಬಿಯನ್ನು ಬೆಳೆಯಲು ವಿಪುಲ ಅವಕಾಶವಿದ್ದು, ಗೇರು ಅಭಿವೃದ್ಧಿ ನಿಗಮದ ವತಿಯಿಂದ ಗುಣಮಟ್ಟದ ಗೋಡಂಬಿ ಸಸಿಗಳನ್ನು ಬೆಳೆಸಿ, ರೈತರಿಗೆ ನೀಡಲಾಗುವುದು. ಇದಕ್ಕಾಗಿ 1 ಕೋಟಿ ರೂ. ಅನುದಾನ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದರು.

ಗೇರು ಅಭಿವೃದ್ಧಿ ಮಂಡಳಿ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿರುವ ಗೇರು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಂಡೋಸಲ್ಫಾನ್ ಅನಾಹುತದ ಬಳಿಕ ಹಲವು ರೈತರು ಗೇರು ಬೆಳೆಯುವುದರಿಂದಲೇ ವಿಮುಖರಾಗಿದ್ದಾರೆ. ಇವರಿಗೆ ಮತ್ತೆ ಉತ್ತೇಜನ ನೀಡಿ ಗತವೈಭವ ಮರಳುವಂತೆ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಆಸಕ್ತ ರೈತರಿಗೆ ಸಸಿಗಳನ್ನು ನಿಗಮದ ನರ್ಸರಿಗಳಲ್ಲಿಯೇ ಬೆಳೆಸಿ, ಪೂರೈಸುವುದು ಸೂಕ್ತ ಎಂದು ಪರಿಗಣಿಸಿ, ಈ ವರ್ಷದಿಂದಲೇ ಕಸಿ ಮಾಡಿದ ಗೋಡಂಬಿ ಸಸಿ ಬೆಳೆಸಲು ಸೂಚನೆ ನೀಡಲಾಗಿದೆ. ಇದಕ್ಕಾಗಿ 1 ಕೋಟಿ ರೂ. ಅನುದಾನ ನೀಡಲಾಗುವುದು ಎಂದರು.

1 ಕೋಟಿ ರೂ. ವೆಚ್ಚದಲ್ಲಿ ಸಸಿಗಳನ್ನು ಬೆಳೆಸಿ ಮುಂದಿನ ವರ್ಷದಿಂದ ಸಬ್ಸಡಿ ದರದಲ್ಲಿ ರೈತರಿಗೆ ಈ ಸಸಿಗಳನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.
ಇಂದು ಗೇರು ಮಳಿಗೆಗಳಿಗೆ ತಾವು ಭೇಟಿ ನೀಡಿದ್ದು, ಗೇರು ಮೌಲ್ಯವರ್ಧನೆಗೆ ಒತ್ತು ನೀಡಿದರೆ, ರೈತರಿಗೆ ಹೆಚ್ಚಿನ ಮಾಹಿತಿ ಪೂರೈಸಿದರೆ, ಉತ್ಪಾದನಾ ವೆಚ್ಚ ತಗ್ಗಿ, ಆದಾಯ ಹೆಚ್ಚುತ್ತದೆ ಅದರಿಂದ ಅವರಿಗೆ ಅನುಕೂಲ ಆಗುವುದರ ಜೊತೆಗೆ ಗೇರು ಉತ್ಪಾದನೆಯೂ ಹೆಚ್ಚಳವಾಗುತ್ತದೆ ಎಂದು ಹೇಳಿದರು.

ನಾವು ಇಂದು ಕಚ್ಚಾ ಗೇರು ಬೀಜವನ್ನು ಆಮದು ಮಾಡಿಕೊಂಡು ಸಂಸ್ಕರಿಸುವ ಸ್ಥಿತಿ ಬಂದಿದೆ. ಹೀಗಾಗಿ ಇಂತಹ ಮೇಳ, ಕಾರ್ಯಾಗಾರಗಳ ಮೂಲಕ ರೈತರಿಗೆ ಮಾಹಿತಿಯ ಜೊತೆಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಲಾಗುವುದು, ಕರ್ನಾಟಕವನ್ನು ಗೇರು ಕ್ಷೇತ್ರದಲ್ಲಿ ಸ್ವಾವಲಲಂಬಿಯನ್ನಾಗಿ ಮಾಡಲಾಗುವುದು ಎಂದರು.

ಪಶ್ಚಿಮಘಟ್ಟ ಇರುವ ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದ ನೀವು ಪುಣ್ಯವಂತರು. ಪಶ್ಚಿಮ ಘಟ್ಟಗಳು ಮಳೆಯ ಮಾರುತ ತಡೆದು ದೇಶದಾದ್ಯಂತ ವ್ಯಾಪಕ ಮಳೆ ಆಗುವಂತೆ ಮಾಡುತ್ತವೆ. ಹೀಗಾಗಿ ಪಶ್ಚಿಮ ಘಟ್ಟವನ್ನು ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದರು.

ನಷ್ಟದಲ್ಲಿದ್ದ ಗೇರು ಅಭಿವೃದ್ಧಿ ನಿಗಮ ನಿಯಮಿತವನ್ನು ಲಾಭದತ್ತ ತೆಗೆದುಕೊಂಡು ಹೋಗುವಲ್ಲಿ ಮಮತಾ ಗಟ್ಟಿ ಅವರು ಶ್ರಮಿಸಿದ್ದು, ಅಭಿನಂದನಾರ್ಹರಾಗಿದ್ದಾರೆ ಎಂದರು.
ಇಂದು ನಾವು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿ ಸಾಗಿದ್ದು, ಒಂದು ತಿಂಗಳ ಮಳೆ ಒಂದು ವಾರದಲ್ಲಿ ಬೀಳುತ್ತದೆ. ಒಂದು ವಾರದ ಮಳೆ ಒಂದು ದಿನದಲ್ಲಿ ಬೀಳುತ್ತದೆ. ಇದರಿಂದ ಬೆಳೆ ನಷ್ಟ ಆಗುತ್ತಿದೆ. ವಾಡಿಕೆಯಷ್ಟೇ ಮಳೆಯಾದರೂ, ಒಂದೇ ದಿನ ವಿಪರೀತ ಮಳೆ ಬೀಳುತ್ತಿರುವುದರಿಂದ ಹಾನಿ ಹೆಚ್ಚಾಗುತ್ತಿದೆ. ಹೀಗಾಗಿ ವೃಕ್ಷ ಸಂರಕ್ಷಣೆಗೆ ನಾವೆಲ್ಲರೂ ಸಂಕಲ್ಪ ಮಾಡಬೇಕು, ಹಸಿರು ಹೊದಿಕೆ ಹೆಚ್ಚಿಸಬೇಕು ಎಂದರು.

ಮೇಳದ ಅಂಗವಾಗಿ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಚಿತ್ರ ಬರೆದ ಚಿಣ್ಣರೊಂದಿಗೆ ಕೆಲ ಸಮಯ ಕಳೆದ ಸಚಿವರು, ಮಕ್ಕಳನ್ನು ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ 12 ಪ್ರಗತಿಪರ ರೈತರನ್ನು ಸನ್ಮಾನಸಲಾಯಿತು.

ಶಾಸಕ ವೇದವ್ಯಾಸ ಕಾಮತ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರುಗಳಾದ ರಾಜೇಗೌಡ, ಅಶೋಕ್ ಕುಮಾರ್ ರೈ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್. ಗಟ್ಟಿ, ಮಾಜಿ ಸಚಿವ ರಮಾನಾಥ ರೈ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page