ಸಮಗ್ರ ಸುದ್ದಿ

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ. ಜಾರ್ಜ್ |ಮಾನ್ಸೂನ್ ಸಿದ್ಧತೆ, ವಿದ್ಯುತ್‌ ಬೇಡಿಕೆ, ಪೂರೈಕೆ ಹಾಗೂ ಇತರ ಯೋಜನೆಗಳ ಕುರಿತ ಚರ್ಚೆ

Share

ಬೆಂಗಳೂರು: ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್ ಮೂಲಕ ರಾಜ್ಯವು ಕಳೆದ ಎರಡೂವರೆ ತಿಂಗಳಲ್ಲಿ ಪ್ರತಿ ಯೂನಿಟ್‌ಗೆ 9.08 ಪೈಸೆಯಂತೆ ಬರೋಬ್ಬರಿ 423 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ತನ್ನು ರಾಷ್ಟ್ರೀಯ ಗ್ರಿಡ್‌ಗೆ ಮಾರಾಟ ಮಾಡಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಬುಧವಾರ ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ನೇತೃತ್ವದ ನೂತನ ಸರ್ಕಾರದಲ್ಲಿ ಇಂಧನ ಸಚಿವರಾಗಿ ಮತ್ತೆ ಅಧಿಕಾರ ವಹಿಸಿಕೊಂಡು ನಂತರ ಬೆಸ್ಕಾಂ ಕಾರ್ಪೋರೆಟ್‌ ಕಚೇರಿಯಲ್ಲಿ ಬುಧವಾರ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದ ಸಚಿವ ಜಾರ್ಜ್‌ ಅವರು ಮಾನ್ಸೂನ್ ಸಿದ್ಧತೆ, ಕುಸುಮ್‌ ಯೋಜನೆ, ಮುಖ್ಯಮಂತ್ರಿ ಸೌರ ಕೃಷಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.

“2026ರ ಏಪ್ರಿಲ್ – ಜೂನ್ (8ರವರೆಗೆ) ಅವಧಿಯಲ್ಲಿ 423 ಕೋಟಿ ರೂಪಾಯಿ ಮೌಲ್ಯದ ವಿದ್ಯುತನ್ನು ರಾಷ್ಟ್ರೀಯ ಗ್ರಿಡ್‌ಗೆ ಮಾರಾಟ ಮಾಡಿದ್ದೇವೆ. ಹಗಲಿನ ವೇಳೆ ಕಡಿಮೆ ದರಕ್ಕೆ ವಿದ್ಯುತ್‌ ಖರೀದಿಸಿ, ರಾತ್ರಿ ವೇಳೆ ಜಲ ಮತ್ತು ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ. ಈ ಬೇಸಿಗೆಯಲ್ಲಿ ವಿದ್ಯುತ್‌ ಬೇಡಿಕೆಯನ್ನು ಸಮರ್ಥವಾಗಿ ಪೂರೈಸುವ ಜತೆಗೆ ಈ ಸಾಧನೆ ಮಾಡಿದ್ದೇವೆ. ವಿದ್ಯುತ್ ಉತ್ಪಾದನೆ, ಗ್ರಿಡ್ ನಿರ್ವಹಣೆ ಮತ್ತು ಇಂಧನ ಮಾರುಕಟ್ಟೆಯಲ್ಲಿ ವ್ಯಾವಹಾರಿಕ ಜಾಣ್ಮೆಯ ಫಲ ಇದು” ಎಂದು ಇಂಧನ ಸಚಿವರು ಹೇಳಿದರು.

ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಇಂಧನ ಬೇಡಿಕೆ ಮತ್ತು ಬಳಕೆಯ ಕುರಿತು ಪ್ರಮುಖ ಅಂಕಿ-ಅಂಶಗಳನ್ನು ನೀಡಿದ ಸಚಿವ ಕೆ.ಜೆ. ಜಾರ್ಜ್, “2023–24ರ ಆರ್ಥಿಕ ವರ್ಷದಲ್ಲಿ ರಾಜ್ಯದ ಗರಿಷ್ಠ ಬೇಡಿಕೆ 18,478 ಮಿಲಿಯನ್‌ ಯೂನಿಟ್‌ ಆದರೆ ಒಟ್ಟು ಬಳಕೆ 10,451 ಮಿಲಿಯನ್‌ ಯೂನಿಟ್‌ನಷ್ಟಿತ್ತು. ವರ್ಷದಿಂದ ವರ್ಷಕ್ಕೆ ಇದು ಶೇ. 19ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ನಂತರ 2024–25ರ ಅವಧಿಯಲ್ಲಿ ಗರಿಷ್ಠ ಬೇಡಿಕೆ 17,682 ಮಿಲಿಯನ್‌ ಯೂನಿಟ್‌ ಆದರೆ ಮತ್ತು ಒಟ್ಟು ಬಳಕೆ 9,324 ಮಿಲಿಯನ್‌ ಯೂನಿಟ್‌ನಷ್ಟಿತ್ತು. ವರ್ಷದಿಂದ ವರ್ಷಕ್ಕೆ ಶೇ.28ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಪ್ರಸಕ್ತ ಆರ್ಥಿಕ ವರ್ಷ ಜೂನ್ 8ರವರೆಗಿನ ಗರಿಷ್ಠ ಬೇಡಿಕೆ 13,904 ಮಿಲಿಯನ್‌ ಯೂನಿಟ್‌ ಆಗಿದ್ದು, ಬಳಕೆ 2,103 ಮಿಲಿಯನ್‌ ಯೂನಿಟ್‌ ನಷ್ಟಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 14ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ,”ಎಂದರು.

38,041 ಮಿಲಿಯನ್‌ ಯೂನಿಟ್‌ ವಿದ್ಯುತ್ ಉತ್ಪಾದನೆ

“ವಿದ್ಯುತ್ ಉತ್ಪಾದನೆಯಲ್ಲಿ ಸದೃಢ ಹೆಜ್ಜೆಗಳನ್ನಿಡುತ್ತಿರುವ ರಾಜ್ಯವು 2025–26ರಲ್ಲಿ ಉಷ್ಣ, ಜಲ, ಅನಿಲ, ಸೌರ, ಪವನ ಮತ್ತು ತ್ಯಾಜ್ಯದಿಂದ ಇಂಧನ ಮೂಲಗಳಿಂದ ಒಟ್ಟು ವಿದ್ಯುತ್ 38,041 ಮಿಲಿಯನ್‌ ಯೂನಿಟ್‌ ಉತ್ಪಾದಿಸಿದೆ. 2026–27ರ ಅಂದಾಜಿಸಲಾಗಿರುವ ವಿದ್ಯುತ್‌ ಉತ್ಪಾದನೆಯ ಪ್ರಮಾಣ 38,205 ಮಿಲಿಯನ್‌ ಯೂನಿಟ್‌ ಆಗದೆ. ಗುಣಮಟ್ಟದ ವಿದ್ಯುತ್ ಪೂರೈಕೆ ಮತ್ತು ಸಾಮರ್ಥ್ಯ ವೃದ್ಧಿ ಜತೆಗೆ ವಿದ್ಯುತ್‌ ಮೂಲಸೌಕರ್ಯ ಸುಧಾರಣೆ ಮೂಲಕ ಇಂಧನ ಇಲಾಖೆಯು ಸುಸ್ಥಿರ ಪ್ರಗತಿ ಸಾಧಿಸುತ್ತಿದೆ,”ಎಂದು ಜಾರ್ಜ್‌ ಹೇಳಿದರು.

ಮಾನ್ಸೂನ್ ಸಿದ್ಧತೆ

ಮಳೆ ಮತ್ತು ಗಾಳಿಯಿಂದಾಗುವ ಹಾನಿ ನಂತರ ವಿದ್ಯುತ್ ಅನ್ನು ತ್ವರಿತವಾಗಿ ಪುನಃಸ್ಥಾಪಿಸಿ ಜನರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಎಚ್ಚರವಹಿಸಿ ಎಂದು ಸಚಿವರ ಜಾರ್ಜ್‌ ಅಧಿಕಾರಿಗಳಿಗೆ ಸೂಚಿಸಿದರು.

ಸಚಿವರಿಗೆ ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, “ಈವರೆಗೆ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಹಾನಿಗೊಳಗಾದ 33,400 ಕಂಬಗಳು, 1,441 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 343.56 ಕಿ.ಮೀ. ವಿದ್ಯುತ್ ಮಾರ್ಗಗಳನ್ನು ಬದಲಾಯಿಸಲಾಗಿದೆ. ಸದ್ಯ 20,012 ಲೈನ್‌ಮೆನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಮಳೆಗಾಲದ ಕಾರ್ಯಾಚರಣೆಗಾಗಿ ಹೆಚ್ಚುವರಿಯಾಗಿ 4,883 ಲೈನ್‌ಮೆನ್‌ಗಳನ್ನು ವಿಶೇಷವಾಗಿ ನೇಮಿಸಿದೆ. ಅಲ್ಲದೇ, 99,530 ಕಂಬಗಳು ಮತ್ತು 12,733 ಟ್ರಾನ್ಸ್‌ಫಾರ್ಮರ್‌ಗಳು ಸೇರಿದಂತೆ ಅಗತ್ಯ ಸಾಮಗ್ರಿಗಳ ದಾಸ್ತಾನಿದೆ,” ಎಂದರು.

ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್. ಶಿವಶಂಕರ, ಪಿಸಿಕೆಎಲ್ ವ್ಯವಸ್ಥಾಪಕ ನಿರ್ದೇಶಕ ಕೋದಂಡಪಾಣಿ, ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹಾಗೂ ಇತರ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Share

You cannot copy content of this page