ಸಮಗ್ರ ಸುದ್ದಿ

ತಂತ್ರಜ್ಞಾನ ಚಾಲಿತ ಮತದಾರರ ನೋಂದಣಿ ಕುರಿತು ಒಂದು ದಿನದ ಅಂತರರಾಷ್ಟ್ರೀಯ ಕಾರ್ಯಗಾರ

Share

ಬೆಂಗಳೂರು: ಭಾರತದ ಚುನಾವಣಾ ಆಯೋಗವು, ಭಾರತೀಯ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣಾ ಸಂಸ್ಥೆ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ಸಹಾಯ ಸಂಸ್ಥೆ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ, ಬೆಂಗಳೂರಿನ ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ “ತಂತ್ರಜ್ಞಾನ ಚಾಲಿತ ಮತದಾರರ ನೋಂದಣಿ” ಕುರಿತ ಒಂದು ದಿನದ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿತ್ತು.

​ ಮುಖ್ಯ ಚುನಾವಣಾಧಿಕಾರಿ ವಿ. ಅನ್ಭು ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರವು, ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮತ್ತು ನಾವೀನ್ಯತೆಗಳ ಕುರಿತು ಜಾಗತಿಕ ಮಟ್ಟದ ಚರ್ಚೆಗೆ ವೇದಿಕೆಯಾಯಿತು.

ಕಾರ್ಯಾಗಾರದ ಅಂಗವಾಗಿ, “ತಂತ್ರಜ್ಞಾನ-ಚಾಲಿತ ಮತದಾರರ ನೋಂದಣಿಯ ಅಂತರರಾಷ್ಟ್ರೀಯ ಕಾರ್ಯಾಗಾರ” ಕುರಿತು ವಿಶೇಷ ಸಭೆಯನ್ನು ನಡೆಸಲಾಯಿತು.ಇದರಲ್ಲಿ ಚುನಾವಣಾ ನಿರ್ವಹಣಾ ಅಧಿಕಾರಿಗಳು, ತಂತ್ರಜ್ಞಾನ ತಜ್ಞರು ಮತ್ತು ವಿವಿಧ ಅಂತರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಮತದಾರರ ನೋಂದಣಿ ವ್ಯವಸ್ಥೆಗಳಲ್ಲಿನ ಜಾಗತಿಕ ಅತ್ಯುತ್ತಮ ಅಭ್ಯಾಸಗಳು ಮತ್ತು ನವೀನ ವಿಧಾನಗಳ ಕುರಿತಾದ ಸಮಗ್ರ ವಿಷಯಾಧಾರಿತ ವರದಿಯನ್ನು ಈ ಸಭೆಯಲ್ಲಿ ಮೌಲ್ಯೀಕರಿಸಲಾಯಿತು.

ಈ ​ಕಾರ್ಯಾಗಾರದಲ್ಲಿ ತಜ್ಞರು ವಿವಿಧ ಮಾದರಿಗಳ ಕುರಿತು ಪ್ರಸ್ತುತಿ ನೀಡಿದರು.

​ಜನಸಂಖ್ಯಾ ನೋಂದಣಿ ಆಧಾರಿತ ಸ್ವಯಂಚಾಲಿತ ವ್ಯವಸ್ಥೆಗಳ ಮಾದರಿ ವಿಷಯದ ಕುರಿತು ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ಪಿ.ಎಸ್. ವಸ್ತ್ರದ್, ಶುಭ ಕಲ್ಯಾಣ್, ಭೂಬಲನ್ ಟಿ. ಮತ್ತು ರಾಹುಲ್ ಶಿಂಧೆ ಅವರು ಮಾಹಿತಿ ನೀಡಿದರು.

​ಹೈಬ್ರಿಡ್ ಡಿಜಿಟಲ್ ಅಸಿಸ್ಟೆಡ್ ನೋಂದಣಿ ವ್ಯವಸ್ಥೆಗಳ ಮಾದರಿ ವಿಷಯದ ಕುರಿತು ಬಿ.ಎಸ್. ಹಿರೇಮಠ್, ಜುಬೀನ್ ಮೊಹಾಪಟ್ರ, ಡಾ. ಆರ್.ಎಚ್. ಗೌಡರ್ ಮತ್ತು ಡಾ. ಸ್ನೇಹ ಸಿ.ವಿ. ಅವರು ವಿಷಯ ಮಂಡಿಸಿದರು.

​ಬಯೋಮೆಟ್ರಿಕ್ ಮತದಾರರ ನೋಂದಣಿ ವ್ಯವಸ್ಥೆಗಳ ವಿಷಯದ ಕುರಿತು ಪಿ.ಎಸ್.ವಸ್ತ್ರದ್, ಶುಭ ಕಲ್ಯಾಣ್, ಕೀರ್ತನಾ ಎಚ್.ಎಸ್. ಮತ್ತು ಜಾಸ್ಮಿನ್ ಜೋಸೆಫ್ ಅವರು ಮಾಹಿತಿ ಹಂಚಿಕೊಂಡರು.

​ಡಿಜಿಟಲ್ ಗುರುತು ಸಕ್ರಿಯಗೊಳಿಸುವ ನೋಂದಣಿ ವ್ಯವಸ್ಥೆಗಳ ಎಂಬ ವಿಷಯದ ಕುರಿತು ಬಿ.ಎಸ್. ಹಿರೇಮಠ್, ರಮೇಶ್ ಕೆ.ಎನ್., ಡಾ. ಜಿತಾಮಿತ್ರ, ಡಾ. ಎನ್. ಮಹಂತೇಶ್ ಎನ್. ಬಿರ್ಜೆ ಮತ್ತು ಶರತ್ ಚಂದ್ರ ದೊಡ್ವಾಡ್ ಅವರು ವಿವರಣೆ ನೀಡಿದರು.

​ಶಾಶ್ವತ ಗಣಕೀಕೃತ ಮತದಾರರ ನೋಂದಣಿ ವ್ಯವಸ್ಥೆಗಳ ಮಾದರಿಯ ವಿಷಯದ ಕುರಿತು ಪಿ.ಎಸ್. ವಸ್ತ್ರದ್, ಯಶವಂತ್ ವಿ. ಗುರುಕರ್, ಡಾ. ಮಹೇಶ್ ಬಾಬು ಎನ್. ಮತ್ತು ಮಹಮ್ಮದ್ ರೋಷನ್ ಅವರು ವಿಷಯ ಮಂಡಿಸಿದರು.

​ಈ ಕಾರ್ಯಾಗಾರವು ಭವಿಷ್ಯದ ಚುನಾವಣಾ ಪ್ರಕ್ರಿಯೆಗಳನ್ನು ಹೆಚ್ಚು ಪಾರದರ್ಶಕ, ಸುಲಭ ಮತ್ತು ತಂತ್ರಜ್ಞಾನ ಆಧಾರಿತವಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.


Share

You cannot copy content of this page