ನವದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ, ಬೆಂಗಳೂರು ಮೆಟ್ರೋ ಮತ್ತು ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಸೇರಿದಂತೆ ಹಲವು ಮಹತ್ವದ ನಗರ ಸಾರಿಗೆ ಯೋಜನೆಗಳಿಗೆ ಶೀಘ್ರ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು.
ಡಬ್ಬಲ್ ಡೆಕ್ಕರ್ ಯೋಜನೆಗೆ ಅನುಮತಿ:
ಸಭೆಯಲ್ಲಿ ಬೆಂಗಳೂರು ಮೆಟ್ರೋ ಮೂರನೇ ಹಂತದ 44.65 ಕಿಲೋಮೀಟರ್ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುಮತಿ ನೀಡುವಂತೆ ಕೋರಲಾಯಿತು. ಈ ಯೋಜನೆಯ 9,700 ಕೋಟಿ ರೂಪಾಯಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಯೋಜನೆ ಆರಂಭಿಸಲು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡುವಂತೆ ಮನವಿ ಮಾಡಲಾಯಿತು.
ಮೆಟ್ರೋ ಎರಡನೇ ಹಂತದ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಅನುಮತಿ:*
ಅದೇ ವೇಳೆ, ಬೆಂಗಳೂರು ಮೆಟ್ರೋ ಎರಡನೇ ಹಂತದ ಯೋಜನೆಯ ಪರಿಷ್ಕೃತ ವೆಚ್ಚಕ್ಕೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಲಾಯಿತು. 72.095 ಕಿಲೋಮೀಟರ್ ಉದ್ದದ ಈ ಯೋಜನೆಯ ವೆಚ್ಚ 26,405.14 ಕೋಟಿ ರೂಪಾಯಿಯಿಂದ 40,425.02 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಮೆಟ್ರೋ ಮೂರನೇ ಎ ಹಂತಕ್ಕೆ ಅನುಮತಿ:
ಇದರ ಜೊತೆಗೆ, ಸರ್ಜಾಪುರ–ಹೆಬ್ಬಾಳ ಮಾರ್ಗದ ಮೆಟ್ರೋ ಮೂರನೇ ‘ಎ’ ಹಂತದ ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಲಾಯಿತು. 37.804 ಕಿಲೋಮೀಟರ್ ಉದ್ದದ ಈ ಯೋಜನೆಯ ಪರಿಷ್ಕೃತ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ.
ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಜಾರಿಗೆ ಅನುಮತಿ:
ಸಭೆಯಲ್ಲಿ ಬೆಂಗಳೂರು–ಮೈಸೂರು, ಬೆಂಗಳೂರು–ಕನಕಪುರ, ಬೆಂಗಳೂರು–ತುಮಕೂರು, ಬೆಂಗಳೂರು–ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು–ಕೋಲಾರ ಮಾರ್ಗಗಳಲ್ಲಿ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಜಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ರಾಜ್ಯದ ವೇಗವಾಗಿ ಬೆಳೆಯುತ್ತಿರುವ ನಗರ ಸಾರಿಗೆ ಅಗತ್ಯಗಳನ್ನು ಪೂರೈಸಲು ಈ ಯೋಜನೆಗಳು ಅತ್ಯಂತ ಮಹತ್ವದ್ದಾಗಿದ್ದು, ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತಪಡಿಸಲಾಯಿತು.
