ಸಮಗ್ರ ಸುದ್ದಿ

ರಾಜ್ಯದಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಅಸ್ತು

Share

ನವದೆಹಲಿ: ಕರ್ನಾಟಕ ರೈತರ ಹಿತರಕ್ಷಣೆಗೆ ಸದಾ ಬದ್ಧವಾಗಿರುವ ಕೇಂದ್ರ ಸರ್ಕಾರ ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಒತ್ತಾಸೆಯಂತೆ ಬೆಂಬಲ ಬೆಲೆ ಯೋಜನೆಯಡಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅಸ್ತು ಎಂದಿದೆ.

ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ(MSP) ಯಲ್ಲಿ ನಾಫೆಡ್ (NAFED) ಮತ್ತು ಎನ್‌ಸಿಸಿಎಫ್ (NCCF) ಮೂಲಕ ಆದ್ಯತೆ ಮೇಲೆ ತೊಗರಿ ಖರೀದಿಗೆ ತ್ವರಿತ ಅನುಮೋದನೆ ನೀಡುವ ಮೂಲಕ ತಮ್ಮ ವಿಶೇಷ ಮನವಿಗೆ ತಕ್ಷಣ ಸ್ಪಂದಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಈ ಕೂಡಲೇ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಮುಂದಾಗುವಂತೆ ಕೋರಿ ಡಿಸೆಂಬರ್ 4 ರಂದು ಸಚಿವ ಪ್ರಲ್ಹಾದ ಜೋಶಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಇದಕ್ಕೆ ತ್ವರಿತ ಸ್ಪಂದನೆ ನೀಡಿರುವ ಕೃಷಿ ಸಚಿವರು ಐದಾರು ದಿನದಲ್ಲೇ ತೊಗರಿ ಖರೀದಿಗೆ ಅನುಮೋದನೆ ನೀಡಿದ್ದಾರೆ.

2025-26ರ ಖಾರಿಫ್ ಋತುವಿನಲ್ಲಿ ತೊಗರಿ ಖರೀದಿಗಾಗಿ ಬೆಲೆ ಬೆಂಬಲ ಯೋಜನೆ (PSS) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿ.10ರಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದಾರೆ. ಖರೀದಿ ಪ್ರಾರಂಭದ ದಿನಾಂಕದಿಂದ 90 ದಿನಗಳವರೆಗೆ ರಾಜ್ಯದಲ್ಲಿ PSS ಅಡಿಯಲ್ಲಿ ಒಟ್ಟು 9,67,000 MT ತೊಗರಿ ಖರೀದಿಗೆ ಅನುಮೋದನೆ ನೀಡಿದೆ ಎಂದು ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

2025-26ಕ್ಕೆ ಅಂದಾಜು 12.60 LMT ಉತ್ಪಾದನೆಯೊಂದಿಗೆ ಕರ್ನಾಟಕ ಪ್ರಮುಖ ತೊಗರಿ ಬೆಳೆ ಉತ್ಪಾದಕ ರಾಜ್ಯವಾಗಿದೆ. ಮಾರುಕಟ್ಟೆಯಲ್ಲಿ ಮಾದರಿ ಬೆಲೆ ಕ್ವಿಂಟಾಲ್‌ಗೆ ₹ 5,830 ರಿಂದ 6, 700ರ ನಡುವಿದೆ. 2025-26ಕ್ಕೆ ತೊಗರಿ ಬೆಳೆಗೆ ಘೋಷಿಸಲಾದ MSP ಕ್ವಿಂಟಾಲ್‌ಗೆ ₹. 8,000 ಆಗಿದೆ. ಆದರೆ ಮಾರುಕಟ್ಟೆ ಬೆಲೆ MSP ದರಕ್ಕಿಂತ ಕಡಿಮೆಯಿದೆ. ಹಾಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಕೂಡಲೇ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗಿ ರೈತರ ನೆರವಿಗೆ ಬರುವಂತೆ ಸಚಿವ ಜೋಶಿ ಕೇಂದ್ರದ ಗಮನ ಸೆಳೆದಿದ್ದರು.

ಪ್ರಸಕ್ತ ಖಾರಿಫ್ ಋತುವಿನಲ್ಲಿ (2025-26) ಆದ್ಯತೆ ಆಧಾರದ ಮೇಲೆ NAFED ಮತ್ತು NCCF ಮೂಲಕ ತೊಗರಿ ಖರೀದಿಗೆ ಅನುಮೋದಿಸುವ ಅವಶ್ಯಕತೆಯಿದೆ. ಇದರಿಂದ ತೊಗರಿ ಮಾರಾಟ ತೊಂದರೆ ತಡೆಗಟ್ಟಿ, ರೈತರಿಗೆ ನ್ಯಾಯಯುತ ಬೆಲೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಜೋಶಿ ಕೃಷಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ಚವ್ಹಾಣ ಅವರು ಕರ್ನಾಟಕದ ತೊಗರಿ ಬೆಳೆಗಾರರ ಸಂಕಷ್ಟ ಅರಿತು ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮೋದನೆ ನೀಡುವ ಮೂಲಕ ರೈತರ ಬೆನ್ನಿಗೆ ನಿಂತಿದ್ದಾರೆ. ಇದಕ್ಕಾಗಿ ಈರ್ವರೂ ರೈತಪರ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.


Share

You cannot copy content of this page