ಸಮಗ್ರ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

Share

ಬೆಳಗಾವಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಕೆಎಸ್ ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ತಮ್ಮನ್ನು ಭೇಟಿ ಮಾಡಿದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.

ನಮಗೆ ಕ್ರಿಕೆಟ್ ಪಂದ್ಯಾವಳಿ ನಿಲ್ಲಿಸಬೇಕು ಎನ್ನುವ ಯಾವುದೇ ಉದ್ದೇಶವಿಲ್ಲ. ಆದರೆ ಜನಜಂಗುಳಿಯ ನಿಯಂತ್ರಣ ಕ್ರಮಗಳ ಬಗ್ಗೆ ಆಲೋಚಿಸಬೇಕು. ಜೊತೆಗೆ ಮೈಕಲ್ ಡಿ ಕುನ್ಹಾ ಸಮಿತಿ ನೀಡಿರುವ ಸಲಹೆಗಳನ್ನು ಹಂತ, ಹಂತವಾಗಿ ಪಾಲನೆ ಮಾಡುವುದು ನಮ್ಮ ಆಲೋಚನೆ. ಇದನ್ನು ವೆಂಕಟೇಶ್ ಪ್ರಸಾದ್ ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದರು.

ನಮ್ಮ ರಾಜ್ಯದ ಗೌರವ, ಸ್ವಾಭಿಮಾನಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಕ್ರಿಕೆಟ್ ಅಭಿಮಾನಿಗಳ ಭಾವನೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದರು.

ಐಪಿಎಲ್ ಸೇರಿದಂತೆ ಯಾವುದೇ ಪಂದ್ಯಗಳು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ. ಒಗ್ಗೂಡಿ ಕೆಲಸ ಮಾಡೋಣ ಎಂದು ತಿಳಿಸಿದ್ದೇನೆ. ನೂತನ ಸ್ಟೇಡಿಯಂಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದರ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದೆ ನಡೆಯುವ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಬೇಕು ಎಂದು ನೂತನವಾಗಿ ಕೆಎಸ್ ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮತ್ತು ತಂಡದವರು ಮುಖ್ಯಮಂತ್ರಿಯವರು ಹಾಗೂ ತನ್ನನ್ನು ಭೇಟಿ ಮಾಡಿ ಸರ್ಕಾರದ ಸಹಕಾರ ಕೋರಿದ್ದಾರೆ ಎಂದರು.

ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಅವರ ಬೆಂಬಲ ಹೊಂದಿರುವ ಹಾಗೂ ನೂತನ ಜವಾಬ್ದಾರಿ ಹೊತ್ತಿರುವ ವೆಂಕಟೇಶ್ ಪ್ರಸಾದ್ ಅವರ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ. ಇವರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದೇನೆ ಎಂದರು.

ಧರ್ಮಸ್ಥಳ ಷಡ್ಯಂತ್ರದ ಬಗ್ಗೆ ಧೈರ್ಯದಿಂದ ಹೇಳಿದ್ದೆ:

ಧರ್ಮಸ್ಥಳ ವಿಚಾರದಲ್ಲಿ ನೀವು ಷಡ್ಯಂತ್ರ ನಡೆದಿದೆ ಎಂದು ಈ ಹಿಂದೆ ಹೇಳಿದ್ದೀರಿ. ಈಗ ಸಿಕ್ಕಿರುವ ಚಾರ್ಜ್ ಶೀಟ್ ನಲ್ಲಿ ದೂರುದಾರರೇ ಆರೋಪಿಗಳು ಎನ್ನುವ ಮಾಹಿತಿ ಇದೆ ಎಂದು ಕೇಳಿದಾಗ, ನನಗೆ ಧರ್ಮಸ್ಥಳದ ಇತಿಹಾಸ ಗೊತ್ತು ಹಾಗೂ ಅವರು ಯಾರೂ ಸಹ ಈ ರೀತಿ ಮಾಡುವುದಿಲ್ಲ ಎನ್ನುವುದೂ ಗೊತ್ತಿತ್ತು. ಆದ ಕಾರಣಕ್ಕೆ ನಾನು ಧೈರ್ಯದಿಂದ ಈ ವಿಚಾರವನ್ನು ಹೇಳಿದ್ದೆ ಎಂದರು.

ಚಾರ್ಜ್ ಶೀಟ್ ಪ್ರತಿಯಲ್ಲಿ ಏನಿದೆ ಎಂದು ನಾನು ಓದಿಲ್ಲ. ಸರ್ಕಾರ ಕಾನೂನಿನ ಅಡಿ ಏನು ಕ್ರಮ ತೆಗೆದುಕೊಳ್ಳಬೇಕು ಅದು ನಡೆಯುತ್ತದೆ. ಅಂತಿಮವಾಗಿ ಸತ್ಯ ಹೊರಗಡೆ ಬಂದಿದೆ. ಬಿಜೆಪಿ ಹಾಗೂ ಆರ್ ಎಸ್ ಎಸ್ ನಡುವಿನ ಆಳವಾದ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಈ ಪಿತೂರಿ ನಡೆದಿದೆ ಎಂದರು.

ರೈತರ ಸಮಸ್ಯೆಗಳನ್ನೂ ಸಹ ಬಗೆಹರಿಸಿದ್ದೇವೆ:
ನಮ್ಮ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಿದೆ. ಕಬ್ಬು ಹಾಗೂ ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ದೊಡ್ಡ ತೀರ್ಮಾನ ತೆಗೆದುಕೊಂಡಿದ್ದೇವೆ. ವಿರೋಧ ಪಕ್ಷ ಈ ವಿಚಾರದಲ್ಲಿ ವಿಫಲವಾಗಿದೆ ಎಂದರು.

ದ್ವೇಷ ಭಾಷಣ ನಿಯಂತ್ರಣ ವಿಧೇಯಕ; ಸರ್ಕಾರದ ಅಜೆಂಡಾ: ದ್ವೇಷ ಭಾಷಣ ನಿಯಂತ್ರಣ ವಿಧೇಯಕ ವಿಚಾರವಾಗಿ ಕೇಳಿದಾಗ, ಇದು ನಮ್ಮ ಸರ್ಕಾರದ ಅಜೆಂಡಾ. ನಮ್ಮ ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ದ್ವೇಷ ಭಾಷಣವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.


Share

You cannot copy content of this page