ಬೆಂಗಳೂರು : ಪಿಎಂಎಫ್‍ಎಂಇ ಯೋಜನೆಯಡಿ ಮಂಜೂರಾಗಿರುವ ಅರ್ಜಿಗಳನ್ನು ಮೂರು ದಿನಗಳೊಳಗೆ ಇತ್ಯರ್ಥಪಡಿಸಿ ವಿಲೇವಾರಿ ಮಾಡುವಂತೆ ಎಲ್ಲಾ ಬ್ಯಾಂಕ್‍ಗಳ ಮ್ಯಾನೇಜರುಗಳಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು, ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್. ಶಿವಪ್ರಕಾಶ್ ಅವರು ತಿಳಿಸಿದರು.
ಇಂದು ಈಡನ್ ಪಾರ್ಕ್ ಹೋಟೆಲ್ ನಲ್ಲಿ ಪಿಎಂಎಫ್‍ಎಂಇ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿರುವ ಬ್ಯಾಂಕ್‍ಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ ನಂತರ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26 ನೇ ಸಾಲಿನಲ್ಲಿ ರಾಜ್ಯದಲ್ಲಿ 5000 ಆಹಾರ ಸಂಸ್ಕರಣ ಉದ್ದಿಮೆಗಳನ್ನು ಸ್ಥಾಪಿಸುವುದಾಗಿ ಘೋಷಿಸಿ, ಅದಕ್ಕಾಗಿ 206 ಕೋಟಿ ರೂ. ಅನುದಾನವನ್ನು ಒದಗಿಸಿದ್ದಾರೆ. ಹಾಗಾಗಿ ಈ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಬ್ಯಾಂಕ್ ಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲಾಯಿತು ಎಂದರು.
ಪಿಎಂಎಫ್‍ಎಂಇ ಯೋಜನೆಯಡಿ ರೂ.15 ಲಕ್ಷ ಸಹಾಯಧನ:
ರಾಜ್ಯ ಮತ್ತು ಕೇಂದ್ರ ಸರ್ಕಾರದ 60:40 ಅನುಪಾತದಡಿ ಕೇಂದ್ರ ಸರ್ಕಾರ 6 ಲಕ್ಷ ರೂ. ರಾಜ್ಯ ಸರ್ಕಾರದಿಂದ 9 ಲಕ್ಷ ರೂ.ಗಳು ಒಟ್ಟು 15 ಲಕ್ಷ ರೂ.ಗಳ ಸಹಾಯಧನ ನೀಡುವ ಈ ಯೋಜನೆಗೆ ಈಗಾಗಲೇ ರಾಜ್ಯದಾದ್ಯಂತ 6215 ಅರ್ಜಿಗಳು ಸ್ವೀಕೃತವಾಗಿದ್ದು, ಅದರಲ್ಲಿ 4150 ಅರ್ಜಿಗಳು ವಿವಿಧ ಬ್ಯಾಂಕುಗಳಿಗೆ ಸಲ್ಲಿಕೆಯಾಗಿವೆ. ಅವುಗಳ ಪೈಕಿ 1682 ಅರ್ಜಿಗಳಿಗೆ ಸಹಾಯಧನಕ್ಕಾಗಿ ಬ್ಯಾಂಕ್ ಸಾಲ ಮಂಜೂರಾಗಿದೆ. ಉಳಿದಿರುವ 2600 ಅರ್ಜಿಗಳು ಪರಿಶೀಲನೆ ಹಂತದಲ್ಲಿದೆ. ಮಂಜೂರಾತಿ ದೊರಕಿರುವ 780 ಅರ್ಜಿಗಳನ್ನು ಇನ್ನು ಮೂರು ದಿನಗಳಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪಿಎಂಎಫ್‍ಎಂಇ ಯೋಜನೆಗೆ ಕೆನರಾ ಬ್ಯಾಂಕ್‍ಗೆ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, 5718 ಅರ್ಜಿಗಳು ಸಲ್ಲಿಕೆಯಾಗಿದ್ದು, 2648 ಅರ್ಜಿಗಳಿಗೆ ಮಂಜೂರಾತಿ ದೊರಕಿದೆ. ಎರಡನೇ ಸ್ಥಾನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದ್ದು, ಇದರಲ್ಲಿ 5437 ಅರ್ಜಿಗಳು ಸಲ್ಲಿಕೆಯಾಗಿದ್ದು, 1443 ಅರ್ಜಿಗಳಿಗೆ ಮಂಜೂರಾತಿ ಸಿಕ್ಕಿದೆ. ಇನ್ನು ಮೂರನೇ ಸ್ಥಾನದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇದ್ದು, ಇದರಲ್ಲಿ 2073 ಅರ್ಜಿಗಳು ಸಲ್ಲಿಕೆಯಾಗಿದ್ದು, 853 ಅರ್ಜಿಗಳಿಗೆ ಮಂಜೂರಾತಿ ಸಿಕ್ಕಿದೆ.
ಬೆಳಗಾವಿ ಜಿಲ್ಲೆಯಿಂದ ಅಧಿಕ ಅರ್ಜಿಗಳು ಸಲ್ಲಿಕೆ:
ಅತಿ ಹೆಚ್ಚು ಅರ್ಜಿಗಳು ಬೆಳಗಾವಿ ಜಿಲ್ಲೆಯಿಂದ ಸಲ್ಲಿಕೆಯಾಗಿದ್ದು, ಹಾವೇರಿ, ಉಡುಪಿ ಮತ್ತು ಬೆಂಗಳೂರು ನಗರ ಜಿಲ್ಲೆಗಳು ನಂತರದ ಸ್ಥಾನವನ್ನು ಪಡೆದಿದ್ದು, ಶೇಕಡ 52 ರಿಂದ 60 ರಷ್ಟು ಮಹಿಳಾ ಫಲಾನುಭವಿಗಳು ಈ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವ ಯೋಜನೆ :
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧ ಗೊಳಿಸುವಿಕೆ (ಪಿಎಂಎಫ್‍ಎಂಇ) ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಂದು ಮಹತ್ವವಾದ ಯೋಜನೆಯಾಗಿರುತ್ತದೆ. (Flagship Programme) ಪಿಎಂಎಫ್‍ಎಂಇ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯು ರಾಜ್ಯ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಈ ಯೋಜನೆಯಡಿ ಸಹಾಯಧನ ಪಡೆಯಲು ಬಯಸುವವರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಅರ್ಜಿ ಮಂಜೂರಾತಿಯಲ್ಲಿ ಆಗುತ್ತಿರುವ ಅಡೆತಡೆಗಳ ಬಗ್ಗೆ ಬ್ಯಾಂಕ್‍ನ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ.
ಬ್ಯಾಂಕ್ ನಲ್ಲಿ ನಿಯಮ ಸಡಿಲಗೊಳಿಸಲು ಸೂಚನೆ:
ಅರ್ಜಿ ಮಂಜೂರಾತಿ ಸಮಯದಲ್ಲಿ 10 ಲಕ್ಷ ರೂಗಳಿಗಿಂತ ಕಡಿಮೆ ಇರುವ ಸಾಲಕ್ಕೆ (collateral security) ಮೇಲಾಧಾರ ಭದ್ರತೆಯನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೆ, ಖಾತೆಯನ್ನು ಮಾಡಿಸಿ ಅರ್ಜಿಯನ್ನು ಸ್ವೀಕರಿಸುವುದು, ಅರ್ಜಿ ಮಂಜೂರಾತಿ ಸಂದರ್ಭದಲ್ಲಿ ಮಾಲಿನ್ಯ ಮಂಡಳಿಯ ಅನುಮತಿ ಕೇಳುವಂತಿಲ್ಲ, ಉದ್ಯಮ್ ಅಥವಾ ವ್ಯಾಪಾರಿಗಳ ಲೈಸೆನ್ಸ್ ಬದಲಿಗೆ ಗ್ರಾಮ ಪಂಚಾಯತಿ ಅಥವಾ ಮುನ್ಸಿಪಲ್ ಕೌನ್ಸಿಲ್ ಅವರ ಅನುಮತಿಯನ್ನು ಪರಿಗಣಿಸುವುದು ಇವೇ ಮುಂತಾದ ಕೆಲವು ನಿಯಮಗಳನ್ನು ಸಡಿಲಗೊಳಿಸುವಂತೆ ಸೂಚಿಸಲಾಗಿದೆ ಎಂದರು.
ರಾಜ್ಯ ಮಟ್ಟದ ಬ್ಯಾಂಕ್‍ಗಳ ಸಮಿತಿಯ ಅಧ್ಯಕ್ಷರಾದ ಬಾಸ್ಕರ್ ಚಕ್ರವರ್ತಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಬ್ಯಾಂಕ್‍ಗಳಲ್ಲಿ ಈ ಯೋಜನೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಮಂಜೂರಾತಿ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿ, ಆದಷ್ಟು ಶೀಘ್ರದಲ್ಲಿ ಸಹಾಯಧನ ಕೋರಿ ಬಂದಿರುವ ಅರ್ಜಿಗಳಿಗೆ ಮಂಜೂರಾತಿ ನೀಡುವಂತೆ ಬ್ಯಾಂಕ್‍ನ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರದ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯದ ಅಧಿಕಾರಿಗಳಾದ ರಮೇಶ್ ಠಾಕೂರ್ ಅವರು ಆನ್ ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿ, ಈ ಯೋಜನೆಯ ಉದ್ದೇಶ ಅಸಂಘಟಿತ ಆಹಾರ ಸಂಸ್ಕರಣಾ ವಲಯದಲ್ಲಿರುವ ಕಿರು ಉದ್ಯಮಗಳನ್ನು ಬಲಪಡಿಸುವುದಾಗಿದೆ.
ಅದಕ್ಕಾಗಿ ತಾಂತ್ರಿಕ ಬೆಂಬಲ ನೀಡುವುದು ಮತ್ತು ಒಂದು ಜಿಲ್ಲೆ ಒಂದು ಉತ್ಪನ್ನ ವಿಧಾನದ ಮೂಲಕ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಗೆ ಸಹಾಯ ಮಾಡುವುದಾಗಿದೆ. ಹಾಗಾಗಿ ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾಗಿರುವ ಈ ಯೋಜನೆ ಸಾಕಾರಗೊಳ್ಳಲು ಬ್ಯಾಂಕ್‍ಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳುವ ಮೂಲಕ ಸಭೆಯಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು, ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯ ಅಧಿಕಾರಿಗಳು, ಸಂಸ್ಥೆಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
