ಸಮಗ್ರ ಸುದ್ದಿ

21 ಎಸಿಎಫ್ ಗಳಿಗೆ ನಿಷ್ಠೆ, ದಕ್ಷತೆಯ ಪ್ರಮಾಣವಚನ ಬೋಧಿಸಿದ ಸಚಿವ ಈಶ್ವರ ಖಂಡ್ರೆ | ಒತ್ತುವರಿ ತೆರವಿಗೆ ಎಸಿಎಫ್ ಗಳಿಗೆ ಕರೆ

Share

ಬೆಳಗಾವಿ : ಕರ್ನಾಟಕ ಲೋಕಸೇವಾ ಆಯೋಗದಿಂದ ನೇರ ನೇಮಕಾತಿಗೊಂಡು ಯಶಸ್ವಿಯಾಗಿ ತರಬೇತಿ ಪೂರೈಸಿರುವ 21 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ನಿಷ್ಠೆ, ದಕ್ಷತೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲ ಪದವೀಧರರಿಗೂ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುವ ಅವಕಾಶ ದೊರಕುವುದಿಲ್ಲ. ನೀವೆಲ್ಲರೂ ಪ್ರತಿಭಾವಂತರು ಮತ್ತು ಅದೃಷ್ಟವಂತರಾಗಿದ್ದೀರಿ. ಕೃಷಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ಅರಣ್ಯಶಾಸ್ತ್ರವನ್ನೇ ಅಭ್ಯಾಸ ಮಾಡಿ ಪದವಿ ಪಡೆದವರೂ ಇದ್ದೀರಿ. ನೀವೆಲ್ಲರೂ ಯಾವುದೇ ಆಮಿಷಕ್ಕೆ ಒಳಗಾಗದೆ ಅರಣ್ಯ ಮತ್ತು ಅರಣ್ಯ ಸಂಪನ್ಮೂಲ ಹಾಗೂ ವನ್ಯಜೀವಿ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಇಂದು ಇಡೀ ವಿಶ್ವ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಂತಹ ಬೃಹತ್ ಸವಾಲು ಎದುರಿಸುತ್ತಿದೆ. ಈ ಕಾಲಘಟ್ಟದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳಾಗಿರುವ ನೀವು, ಅರಣ್ಯ ಸಂರಕ್ಷಾ ಕಾಯಿದೆ 1963, ಅರಣ್ಯ ಸಂರಕ್ಷಣಾ ಕಾಯಿದೆ 1980 ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ಯ ಜಾರಿಗೆ ಶ್ರಮಿಸಬೇಕು, ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವು ಆದೇಶ ಮಾಡಬೇಕು ಎಂದು ಸೂಚಿಸಿದರು.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅತ್ಯಂತ ಮಹತ್ವದ ಇಲಾಖೆಯಾಗಿದ್ದು, ಪ್ರಕೃತಿ, ಪರಿಸರ, ಪಕ್ಷಿ ಸಂಕುಲ, ಪ್ರಾಣಿ ಸಂಕುಲ ಮತ್ತು ಕೀಟ ಸಂಕುಲ ಉಳಿಸುವ ಅವಕಾಶ ನಿಮಗಿದೆ. ಕಾಡನ್ನು ಕಾಪಾಡಿ, ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಶ್ರಮಿಸಿ ಎಂದರು.

ನೂತನ ಎಸಿಎಫ್ ಗಳು ವೃಕ್ಷ ಸಂರಕ್ಷಣೆ, ವೃಕ್ಷ ಸಂವರ್ಧನೆಗೆ ಕಾಯ, ವಾಚಾ, ಮನಸಾ ಶ್ರದ್ಧೆ ಮತ್ತು ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತೇನೆ ಎಂದು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಶ್ರೀನಿವಾಸುಲು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌವ್ಹಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page